ಪೊರೆಸಹಿತ ಕಣದಂಗಗಳು

  ಪೊರೆಸಹಿತ ಕಣದಂಗಗಳು

ಪೊರೆಸಹಿತ ಕಣದಂಗಗಳು

ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್

ಕೋಶರಸಜಾಲವನ್ನು ಕಂಡುಹಿಡಿದವರು ಕೀತ್ ಪೋರ್ಟರ್. ಕೋಶದ್ರವ್ಯದೊಳಗೆ ಕವಲೊಡೆದ ನಾಳಗಳ ರೀತಿಯಲ್ಲಿ ಹರಡಿಕೊಂಡಿರುವ ಇದು ಸೈಟೊಸ್ಕೆಲಿಟನ್‌ಗಳಿಂದಾಗಿದೆ. ಮನುಷ್ಯನಿಗೆ ಅಸ್ಥಿಪಂಜರ ಆಂತರಿಕವಾಗಿ ಆಧಾರ ನೀಡುವಂತೆ ಈ ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್ ಜೀವಕೋಶಕ್ಕೆ ಆಂತರಿಕವಾಗಿ ಆಧಾರ ನೀಡುತ್ತದೆ. ಆದ್ದರಿಂದ ಇದನ್ನು ಜೀವಕೋಶದ ಕಂಕಾಲ ವ್ಯವಸ್ಥೆ ಎನ್ನುವರು. ಅಲ್ಲದೇ ಜೀವಕೋಶದೊಳಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಮತ್ತು ಒಂದು ಕೋಶದಿಂದ ಇನ್ನೊಂದು ಕೋಶಕ್ಕೆ ವಸ್ತುಗಳನ್ನು ಸಾಗಿಸುತ್ತದೆ.

ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್ ರೂಪಗಳು.

ಒರಟು ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್ : ಹೊರಮೈ ಮೇಲೆ ರೈಬೋಸೋಮ್‌ಗಳನ್ನು ಹೊಂದಿದ್ದು ಈ ರೈಬೋಸೋಮ್ಗಳು ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್ ಜಾಲರಚನೆ ಒಳಗೆ ಪ್ರೋಟೀನ್‌ಗಳನ್ನು ಸ್ರವಿಸುತ್ತವೆ.

ನಯವಾದ ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್ : ಜೀವಕೋಶದೊಳಗೆ ಕ್ಯಾಲ್ಸಿಯಂನ ಹತೋಟಿಯಲ್ಲಿ ಮತ್ತು ಸ್ರವಿಕೆಯಲ್ಲಿ ಮುಖ್ಯಪಾತ್ರ ವಹಿಸುತ್ತದೆ. ಜೊತೆಗೆ ಮೇದಸ್ಸು ಹಾಗೂ ಸ್ಟೆರಾಯಿಡ್‌ಗಳ  ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಸಾರ್ಕೊಪ್ಲಾಸ್ಮಿಕ್ ರೆಟಿಕ್ಯುಲಮ್ : ಜೀವಕೋಶದೊಳಗೆ ಕ್ಯಾಲ್ಶಿಯಮ್ ಮಟ್ಟವನ್ನು ನಿಯಂತ್ರಿಸುವಲ್ಲಿ ಮುಖ್ಯಪಾತ್ರ ವಹಿಸುತ್ತವೆ.

ಮೈಟೋಕಾಂಡ್ರಿಯಾ

ಇದು ಪಾಸ್ಪೊಲಿಪಿಡ್‌ ಬೈಲೇಯರ್ (ಪಾಸ್ಪೊಲಿಪಿಡ್‌ ನ ಎರಡು ಪದರಗಳು) ಮತ್ತು ಪ್ರೋಟೀನ್‌ಗಳಿಂದ ಮಾಡಲ್ಪಟ್ಟಿರುತ್ತದೆ

ಮೈಟೋಕಾಂಡ್ರಿಯಾ ಜೀವಕೋಶದ ಉಸಿರಾಟದ ಕೇಂದ್ರವಾಗಿದ್ದು ಇದು ಸೈಟೋಸಾಲ್‌ನಲ್ಲಿ ಉತ್ಪಾದನೆಯಾಗುವ ಗ್ಲೂಕೋಸ್, ಪೈರೊವೇಟ್ ಮತ್ತು ಎನ್.ಎ.ಡಿ.ಎಚ್ ಗಳ ಪ್ರಮುಖ ಉತ್ಪನ್ನಗಳನ್ನು ಆಕ್ಸಿಡೀಕರಣ ಮಾಡಿಕೊಂಡು ಜೊತೆಗೆ ಆಮ್ಲಜನಕವನ್ನು ಬಳಸಿಕೊಂಡು ಗ್ಲುಕೋಸ್ ಅನ್ನು ವಿಭಜಿಸಿ ಕಾರ್ಬನ್ ಡೈ ಆಕ್ಸೈಡ್ ಮತ್ತು ನೀರನ್ನು ಬಿಡುಗಡೆ ಮಾಡುತ್ತದೆ. ಈ ಸಂದರ್ಭದಲ್ಲಿ ಬಿಡುಗಡೆಯಾದ ಶಕ್ತಿಯು ಅಡಿನೋಸಿನ್ ಟ್ರೈ ಫಾಸ್ಪೇಟ್ (ಎ.ಟಿ.ಪಿ) ರೂಪದಲ್ಲಿರುತ್ತದೆ. ಹಾಗಾಗಿ ಇದನ್ನು ಜೀವಕೋಶದ ಶಕ್ತಿ ಉತ್ಪಾದನಾ ಕೇಂದ್ರವೆಂದು ಕರೆಯುವರು. ಸಾಮಾನ್ಯವಾಗಿ ಒಂದು ಜೀವಕೋಶದಲ್ಲಿ 30-40 ಮೈಟೋಕಾಂಡ್ರಿಯಾಗಳಿರುತ್ತವೆ.

ಮೈಟೊಕಾಂಡ್ರಿಯಗಳು ತಮ್ಮದೆ ಆದ ಡಿ.ಎನ್‌.ಎ, ಆರ್.ಎನ್.ಎ ಮತ್ತು ಪ್ರೋಟೀನ್‌ಗಳನ್ನು ಒಳಗೊಂಡಿವೆ. ಹಾಗಾಗಿ ಇವು ಸ್ವತಃ ತಮ್ಮನ್ನು ತಾವು ನಕಲು ಮಾಡಿಕೊಳ್ಳುವ ಕಣದಂಗಗಳಾಗಿವೆ. ಮೈಟೊಕಾಂಡ್ರಿಯಾದಲ್ಲಿನ ಡಿ.ಎನ್.ಎ ಕೋಶಕೇಂದ್ರದಲ್ಲಿರುವ ಡಿ.ಎನ್.ಎ ಗಿಂತಲೂ ಗಾತ್ರದಲ್ಲಿ ಚಿಕ್ಕದಿರುತ್ತದೆ.

ಜೀವಕೋಶಗಳ ಉಸಿರಾಟ ಪ್ರಕ್ರಿಯೆಯನ್ನು ಏರೋಬಿಕ್‌ ರೆಸ್ಪಿರೇಷನ್‌ ಎಂದು ಕರೆಯಲಾಗುತ್ತದೆ, ಇದು ಆಮ್ಲಜನಕದ ಪ್ರಮಾಣದ ಮೇಲೆ ಅವಲಂಬಿತವಾಗಿರುತ್ತದೆ. ಆಕ್ಸಿಜನ್ನಿನ ಪ್ರಮಾಣ ಕಡಿಮೆಯಾದಾಗ ಅನೇರೋಬಿಕ್‌ ರೆಸ್ಪಿರೇಷನ್‌ (ಅಮ್ಲಜನಕವಿಲ್ಲದೆ ನಡೆಯುವ ಪ್ರಕ್ರಿಯೆ) ಮೂಲಕ ಶಕ್ತಿ ಉತ್ಪಾದನೆ ಮಾಡಲಾಗುತ್ತದೆ. ಅನೇರೋಬಿಕ್‌ ರೆಸ್ಪಿರೇಷನ್‌ ಮೂಲಕ ಉತ್ಪಾದನೆಯಾಗುವ ಎ.ಟಿ.ಪಿ ಯ ಪ್ರಮಾಣಕ್ಕಿಂತ ಏರೋಬಿಕ್‌ ರೆಸ್ಪಿರೇಷನ್‌ ಮೂಲಕ ಉತ್ಪಾದನೆಯಾಗುವ ಎ.ಟಿ.ಪಿ ಯ ಪ್ರಮಾಣ ತುಂಬಾ ಹೆಚ್ಚಾಗಿರುತ್ತದೆ. 

ಸಸ್ಯಗಳ ಮೈಟೊಕಾಂಡ್ರಿಯ ಆಕ್ಸಿಜನ್‌ ಇಲ್ಲದೆ, ಅದಕ್ಕೆ ಪರ್ಯಾಯವಾಗಿ ನೈಟ್ರೇಟ್‌ ಅನ್ನು ಬಳಸಿ ಅಲ್ಪ ಪ್ರಮಾಣದಲ್ಲಿ ಎ.ಟಿ.ಪಿ  ಅನ್ನು ಉತ್ಪಾದಿಸುತ್ತವೆ.

ಮೈಟೋಕಾಂಡ್ರಿಯಾದಲ್ಲಿ ಕಂಡುಬರುವ ಥರ್ಮೊಜೆನಿನ್ ಸಾಮಾನ್ಯವಾಗಿ ಬ್ರೌನ್‌ ಅಡಿಪೋಸ್‌ ಟಿಸ್ಯೂನಲ್ಲಿರುತ್ತದೆ. ಥರ್ಮೊಜೆನಿನ್ ದೇಹದಲ್ಲಿ ಉಷ್ಣೋತ್ಪತ್ತಿಯಾಗಲು ಕಾರಣವಾಗುತ್ತದೆ. ಮನುಷ್ಯರಲ್ಲಿ ಬ್ರೌನ್‌ ಅಡಿಪೋಸ್ ಟಿಸ್ಯೂ ಪ್ರಾರಂಭದಲ್ಲಿ ಹೆಚ್ಚಾಗಿದ್ದು ವಯಸ್ಸಾದ ಹಾಗೆ ಕಡಿಮೆಯಾಗುತ್ತದೆ.

ಮನುಷ್ಯರ ಕಾರ್ಡಿಯಾಕ್‌ ಮೈಟೊಕಾಂಡ್ರಿಯದಲ್ಲಿ (ಹೃದಯದ ಮೈಟೊಕಾಂಡ್ರಿಯ) 615 ವಿವಿಧ ಬಗೆಯ ಪ್ರೋಟೀನ್‌ಗಳನ್ನು ಗುರುತಿಸಲಾಗಿದೆ

ಕಾರ್ಡಿಯಾಕ್‌ ಡಿಸ್‌ಫಂಕ್ಷನ್‌ ಎಂದರೆ ಹೃದಯದ ಅಸಹಜ ಕ್ರಿಯೆ, ಹೃದಯದಲ್ಲಿರುವ ಕಾರ್ಡಿಯಾಕ್ ಮೈಟೋಕಾಂಡ್ರಿಯಾಗಳಿಗೆ ವಯಸ್ಸಾಗಿ ಮರಣಿಸುತ್ತವೆ.

ಮೈಟೋಕಾಂಡ್ರಿಯಾ ಹೊರ ಮೆಂಬ್ರೇನ್, ಮಧ್ಯ ಮೆಂಬ್ರೇನ್, ಒಳ ಮೆಂಬ್ರೇನ್, ಮಾತೃಕೆ ಮತ್ತು ಕ್ರಿಸ್ಟ್ ಎಂಬ ವಸ್ತುಗಳನ್ನು ಒಳಗೊಂಡಿದೆ. ಮಾತೃಕೆಯೆಂಬುದು ಮೈಟೋಕಾಂಡ್ರಿಯದೊಳಗಿನ ದ್ರವವಾವಗಿದ್ದು ಅದರೊಳಗೆ ಕ್ರಿಸ್ಟ್ ಗಳು ಕಂಡುಬರುತ್ತವೆ.

ಹೊರ ಮೆಂಬ್ರೇನ್

ಹೊರ ಮೆಂಬ್ರೇನ್ ಪೊರಿನ್ಸ್‌ ಎಂಬ ಇಂಟೆಗ್ರಲ್‌‌ ಪ್ರೋಟೀನ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿದ್ದು ಈ ಪೋರಿನ್ಸ್ಗಳು ಜೀವಕೋಶದೊಳಗೆ ಮಾಲಿಕ್ಯೂಲ್‌ಗಳನ್ನು ಮೆಂಬ್ರೇನಿನ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸುಲಭವಾಗಿ ಸಾಗಿಸಲು ಸಹಾಯಕವಾಗಿವೆ. ಈ ಹೊರಗಿನ ಮೆಂಬ್ರೇನ್ ನಾಶವಾದರೆ ಜೀವಕೋಶ ಮರಣ ಹೊಂದುತ್ತದೆ. ಮೈಟೊಕಾಂಡ್ರಿಯದ ಹೊರ ಮೆಂಬ್ರೇನ್ಎಂಡೊಪ್ಲಾಸ್ಮಿಕ್‌ ರೆಟಿಕುಲಮ್‌ನ ಮೆಂಬ್ರೇನ್ ಜೊತೆಗೆ ಸೇರಿಕೊಂಡು ಮೈಟೊಕಾಂಡ್ರಿಯಾ ಅಸೋಸಿಯೇಟೆಡ್‌ ಮೆಂಬರೇನ್‌ ಎನ್ನುವ ರಚನೆಯನ್ನು ಉಂಟುಮಾಡುತ್ತದೆ. ಇದು  ಎಂಡೊಪ್ಲಾಸ್ಮಿಕ್‌ ರೆಟಿಕುಲಮ್‌ ಮತ್ತು ಮೈಟೊಕಾಂಡ್ರಿಯಗಳ ನಡುವೆ ಲಿಪಿಡ್‌ಗಳ ಸಾಗಾಣಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ಇಂಟರ್ ಮೆಂಬ್ರೇನ್ ಸ್ಪೇಸ್

ಇದು ಹೊರ ಮೆಂಬ್ರೇನ್ ಮತ್ತು ಒಳ ಮೆಂಬ್ರೇನ್‍ಗಳ ಮಧ್ಯದ ಪೊರೆಯಾಗಿದ್ದು ಸೈಟೋಕ್ರೋಮ್ ಎಂಬ ಪ್ರೋಟೀನ್‍ಗಳಿಂದಾಗಿದೆ. ಇಂಟರ್ ಮೆಂಬರೇನ್ ನಲ್ಲಿ ಪ್ರೋಟೀನ್‌ ಪ್ರಮಾಣ ಜಾಸ್ತಿಯಾದಾಗ ಒಳ ಮೆಂಬ್ರೇನ್ ಸುತ್ತಲೂ ಒಂದು ಬಲಿಷ್ಠವಾದ ಎಲೆಕ್ಟ್ರೋಕೆಮಿಕಲ್‌ ಗ್ರೇಡಿಯಂಟ್‌ ಉಂಟಾಗುತ್ತದೆ. ಆಗ ಈ ಪ್ರೋಟೀನ್‌ಗಳು ಎ.ಟಿ.ಪಿ ಸಿಂಥಸೇಸ್‌ ಕಾಂಪ್ಲೆಕ್ಸ್‌ ಮೂಲಕ ಮಾಟ್ರಿಕ್ಸ್‌ಗೆ ಹಿಂದಿರುಗುತ್ತವೆ. ಇದನ್ನು ಪ್ರೋಟಾನ್‌ ಲೀಕ್‌ ಅಥವಾ ಮೈಟೊಕಾಂಡ್ರಿಯಲ್ ಅನ್‌ಕಪಲಿಂಗ್‌ ಎನ್ನುವರು

ಒಳ ಮೆಂಬ್ರೇನ್

ಒಳ ಮೆಂಬರೇನ್ ಕಾರ್ಡಿಯೊಲಿಪಿನ್‌ ಎನ್ನುವ ವಿಶೇಷವಾದ ಪಾಸ್ಪೊಲಿಪಿಡ್‌ನಿಂದ ಕೂಡಿದೆ. ಈ  ಒಳ ಮೆಂಬರೇನ್ ಮಾಟ್ರಿಕ್ಸ್‌ನಲ್ಲಿ ಎ.ಟಿ.ಪಿ ಅನ್ನು ಉತ್ಪಾದಿಸುತ್ತದೆ. ಅಲ್ಲದೆ ಮಾಟ್ರಿಕ್ಸ್‌‌ಗಳ ಒಳಗೂ ಹೊರಗೂ ಮೆಟಬೊಲೈಟ್‌ಗಳ ಸಾಗಣೆಯನ್ನು ನಿಯಂತ್ರಿಸುವ ನಿರ್ದಿಷ್ಟ ಟ್ರಾನ್‌ಪೋರ್ಟ್‌ ಪ್ರೋಟೀನ್‌ಗಳನ್ನು ಒಳಗೊಂಡಿದೆ. 

ಮ್ಯಾಟ್ರಿಕ್ಸ್

ಒಳ ಮೆಂಬ್ರೇನಿನ ಒಳಗಡೆಯಿರುವ ಪ್ರದೇಶವನ್ನು ಮಾಟ್ರಿಕ್ಸ್‌ ಎನ್ನುವರು. ಇದು ಮೈಟೊಕಾಂಡ್ರಿಯದ ಒಟ್ಟಾರೆ ಪ್ರೋಟೀನ್‌ ಅಂಶದ 2/3 ಭಾಗವನ್ನು ಹೊಂದಿರುತ್ತದೆ. ಇದು ಒಳ ಮೆಂಬರೇನಿನಲ್ಲಿರುವ ಸಿಂಥೇಸ್‌ ಜೊತೆಗೆ ಕೂಡಿ ಎ.ಟಿ.ಪಿ ಅನ್ನು ಉತ್ಪಾದಿಸುತ್ತದೆ.

ಕ್ರಿಸ್ಟ್

ಕ್ರಿಸ್ಟ್ಗಳು ಮೈಟೋಕಾಂಡ್ರಿಯದೊಳಗಿರುವ ಮಾತೃಕೆ ಅಥವಾ ಮ್ಯಾಟ್ರಿಕ್ಸ್ನ ಒಳಗೆ ಕಂಡುಬರುತ್ತವೆ. ಈ ಕ್ರಿಸ್ಟ್ಗಳು ದೇಹದ ಎಲ್ಲಾ ಭಾಗಗಳಲ್ಲಿರುವ ಜೀವಕೋಶಗಳಲ್ಲಿ ಒಂದೇ ಪ್ರಮಾಣದಲ್ಲಿ ಕಂಡುಬರುವುದಿಲ್ಲ. ಎ.ಟಿ.ಪಿ ಶಕ್ತಿ ಎಲ್ಲಿ ಹೆಚ್ಚಾಗಿ ಬೇಕಾಗಿರುತ್ತದೋ ಆ ಭಾಗದ ಜೀವಕೋಶಗಳಲ್ಲಿನ ಮೈಟೊಕಾಂಡ್ರಿಯದಲ್ಲಿ ಹೆಚ್ಚು ಕ್ರಿಸ್ಟೆಗಳಿರುತ್ತದೆ.

ಗಾಲ್ಗಿ ಸಂಕೀರ್ಣ

ಜೀವಕೋಶದಲ್ಲಿ ನಡೆಯುವ ಚಟುವಟಿಕೆಗಳಿಗೆ ರಾಸಾಯನಿಕ ದ್ರವಗಳನ್ನು ಸ್ರವಿಸುವುದು, ಜೀವಕೋಶದಲ್ಲಿ ಸಂಯೋಜಿಸಿದ ಪ್ರೋಟೀನ್‌ಗಳು ಮತ್ತು ಲಿಪಿಡ್‌ಗಳಂತಹ ದೊಡ್ಡ ಅಣುಗಳನ್ನು ಸಂಸ್ಕರಿಸುವುದು ಮತ್ತು ಶೇಖರಿಸುವುದು ಗಾಲ್ಗೀಸಂಕೀರ್ಣದ ಕೆಲಸವಾಗಿದೆ.

ಲೈಸೋಸೋಮ್

ಪ್ರಾಣಿ ಜೀವಕೋಶದಲ್ಲಿ ಮಾತ್ರ ಕಂಡುಬರುವ ಲೈಸೊಸೋಮ್‌ಗಳು ಜೀರ್ಣಕಾರಿ ಕಿಣ್ವಗಳನ್ನು (ಹೈಡ್ರೊಲೇಸಸ್ ಆಮ್ಲ) ಹೊಂದಿರುತ್ತವೆ. ಇವು ಜೀವಕೋಶದಲ್ಲಿ ಕಂಡುಬರುವ ಸಾವಯವ ವಸ್ತುಗಳ, ಹೊರಗಿನಿಂದ ದಾಳಿ ಮಾಡುವ ವೈರಸ್, ಬ್ಯಾಕ್ಟೀರಿಯಾ ಇವುಗಳ ಜೀರ್ಣಕ್ರಿಯೆಯಲ್ಲಿ ಸಹಾಯಕವಾಗಿವೆ. ದೇಹದೊಳಗೆ ಹಾನಿಗೊಳಗಾದ, ದುರ್ಬಲವಾದ, ವಯಸ್ಸಾದ, ರೋಗಗ್ರಸ್ತ ಜೀವಕೋಶವನ್ನು ನಾಶಪಡಿಸುತ್ತವೆ. ಆದ್ದರಿಂದ ಇವುಗಳನ್ನು ಆತ್ಮಹತ್ಯಾ ಸಂಚಿಗಳೆಂದು ಕರೆಯುವರು.

ಪೆರೊಕ್ಸಿಸೋಮ್‌

ಪೆರೊಕ್ಸಿಸೋಮ್‌ಗಳಲ್ಲಿ ವಿಷಕಾರಿ ಪೆರಾಕ್ಸೈಡ್‌ಗಳಿಂದ ಪಾರುಮಾಡುವ ಕಿಣ್ವಗಳಿವೆ. ಇಂತಹ ವಿನಾಶಕಾರಿ ಕಿಣ್ವಗಳನ್ನು ಮಿತಿಯಲ್ಲಿರಿಸಲು ಅಗತ್ಯವಾದ ಪೊರೆ ಬಂಧನದ ವ್ಯವಸ್ಥೆ ಪೆರೊಕ್ಸಿಸೋಮ್‌ಗಳಲ್ಲಿದೆ.

ಸೆಂಟ್ರೋಸೋಮ್

ಸೆಂಟ್ರೋಸೋಮ್ ಸೈಟೊಸ್ಕೆಲೆಟನ್‌ನ ಮುಖ್ಯ ಭಾಗವಾದ ಚಿಕ್ಕ ನಳಿಕೆಗಳನ್ನು ಉತ್ಪಾದಿಸುತ್ತದೆ. ಇದು ಜೀವಕೋಶದ ಒಳಗೆ ಎಂಡೊಪ್ಲಾಸ್ಮ ಜಾಲರಚನೆ (ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್) ಮತ್ತು ಗಾಲ್ಗಿ ಸಂಕೀರ್ಣದ ಮೂಲಕ ವಸ್ತುಗಳನ್ನು ಮತ್ತು ಅಗತ್ಯ ರಾಸಾಯನಿಕಗಳನ್ನು ಸಾಗಿಸಲು ನಿರ್ದೇಶನ ಮಾಡುತ್ತದೆ.

ಕುಹರಗಳು

ಕುಹರಗಳು ಪೋಲು ಪದಾರ್ಥಗಳನ್ನು ಪ್ರತ್ಯೇಕಿಸುತ್ತವೆ ಮತ್ತು ಸಸ್ಯ ಜೀವಕೋಶಗಳಲ್ಲಿ ನೀರು ದಾಸ್ತಾನು ಮಾಡುತ್ತವೆ. ಕೆಲವು ಜೀವಕೋಶಗಳಲ್ಲಿ ವಿಶೇಷವಾಗಿ ಅಮೀಬಗಳಲ್ಲಿ ಸಂಕೋಚಕ ಕುಹರಗಳು ಇದ್ದು ಜೀವಕೋಶದಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರಿದ್ದರೆ ಆ ನೀರನ್ನು ಹೊರತಳ್ಳುತ್ತವೆ. ಸಾಮಾನ್ಯವಾಗಿ ಸಸ್ಯ ಮತ್ತು ಶಿಲೀಂಧ್ರಗಳ ಜೀವಕೋಶಗಳಲ್ಲಿನ ಕುಹರಗಳು ಪ್ರಾಣಿ ಜೀವಕೋಶಗಳ ಕುಹರಗಳಿಗಿಂತ ದೊಡ್ಡವಿರುತ್ತವೆ.

ಪ್ಲಾಸ್ಟಿಡ್

ಪ್ಲ್ಯಾಸ್ಟಿಡ್‌ಗಳು ಸಸ್ಯಗಳ ಜೀವಕೋಶಗಳು ಬಳಸುವ ಪ್ರಮುಖ ರಾಸಾಯನಿಕ ಸಂಯುಕ್ತಗಳ ತಯಾರಿಕೆ ಮತ್ತು ಸಂಗ್ರಹಣೆಯ ತಾಣಗಳಾಗಿವೆ. 

ಪ್ಲಾಸ್ಟಿಡ್ಸ್ ಹೆಚ್ಚಾಗಿ ದ್ಯುತಿಸಂಶ್ಲೇಷಣೆಯಲ್ಲಿ ಬಳಸುವ ವರ್ಣದ್ರವ್ಯಗಳನ್ನು ಹೊಂದಿರುತ್ತವೆ ಮತ್ತು ಪ್ಲಾಸ್ಟಿಡ್‌ನಲ್ಲಿನ ವರ್ಣದ್ರವ್ಯಗಳ ಪ್ರಕಾರಗಳು ಜೀವಕೋಶದ ಬಣ್ಣವನ್ನು ನಿರ್ಧರಿಸುತ್ತವೆ. ಇವು ಪ್ರೊಕ್ಯಾರಿಯೋಟ್‌ ಜೀವಕೋಶಗಳಂತೆ ವೃತ್ತಾಕಾರವಾಗಿರುವ ಎರಡು ಎಳೆಯಿರುವ ಡಿಎನ್‌ಎ ಅಣುವನ್ನು ಹೊಂದಿವೆ.

ಪ್ಲಾಸ್ಟಿಡ್ಗಳ ವಿಧಗಳು

1. ಲ್ಯೂಕೋಪ್ಲಾಸ್ಟ್ : ಇವುಗಳು ಬಣ್ಣವಿಲ್ಲದ ಪ್ಲಾಸ್ಟಿಡ್ಸ್. ಸೂರ್ಯನ ಬೆಳಕು ಬೀಳದ ಸಸ್ಯದ ಭಾಗಗಳಾದ ಬೇರು ಮತ್ತು ಕಾಂಡಗಳಲ್ಲಿ ಕಂಡುಬರುತ್ತವೆ. ಮುಖ್ಯವಾಗಿ ಇವು ಆಹಾರ ಸಂಗ್ರಹಣೆಯಲ್ಲಿ ನೆರವಾಗುತ್ತವೆ.

2. ಕ್ಲೋಮೋಪ್ಲಾಸ್ಟ್ : ಹಳದಿಕೆಂಪು ಮತ್ತು ಕಿತ್ತಳೆ ಬಣ್ಣಗಳಲ್ಲಿ ಕಂಡುಬರುತ್ತವೆ.

3. ಕ್ಲೋರೋಪ್ಲಾಸ್ಟ್ : ಸಸ್ಯದ ಎಲೆಗಳ ಭಾಗಗಳಲ್ಲಿ ಕಂಡುಬರುತ್ತವೆ. ಕ್ಲೋರೋಪ್ಲಾಸ್ಟ್ ಗಳಲ್ಲಿ ಕಂಡುಬರುವ ಹಸಿರು ಬಣ್ಣದ ವರ್ಣಕವನ್ನು ಪತ್ರಹರಿತ್ತು (ಕ್ಲೋರೋಫಿಲ್) ಎನ್ನುವರು. ಕ್ಲೋರೋಪ್ಲಾಸ್ಟ್ಗಳು ಎರಡು ಪೊರೆಗಳಿಂದ ಆವೃತವಾಗಿರುತ್ತವೆ. ಒಳಪದರದೊಳಗೆ ಮಾತೃಕೆ ಇದ್ದು ಈ ಮಾತೃಕೆಯೊಳಗೆ ಗ್ರಾನಾ ಮತ್ತು ಸ್ಟ್ರೋಮಾಗಳು ಕಂಡುಬರುತ್ತವೆ. ಅಹಾರ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕ್ಲೋರೋಫಿಲ್ (ಪತ್ರಹರಿತ್ತು) ಗ್ರಾನಾದೊಳಗೆ ಇರುತ್ತದೆ.

4. ಜೆರೊಂಟೊಪ್ಲಾಸ್ಟ್‌ : ಸಸ್ಯ ಸಾಯುವ ಸಮಯದಲ್ಲಿ ಕ್ಲೋರೋಪ್ಲಾಸ್ಟ್ ಇಂದ ಉತ್ಪತ್ತಿಯಾಗುತ್ತವೆ. ಕ್ಲೋರೋಪ್ಲಾಸ್ಟ್ ನಲ್ಲಿನ ಗ್ರಾನಾ ಮತ್ತು ಥೈಲಾಕೋಲಾಯ್ಡ್ ಪೊರೆಗಳು ನಷ್ಟವಾಗದಂತೆ ನೋಡಿಕೊಳ್ಳುವುದು ಹಾಗೂ ಪ್ಲಾಸ್ಟಾಗ್ಲೋಬುಲಿಯನ್ನು ಸಂಗ್ರಹಿಸುವುದು ಇದರ ಪ್ರಮುಖ ಕರ್ತವ್ಯವಾಗಿದೆ.

5. ಅಮೈಲೊಪ್ಲಾಸ್ಟ್‌ : ಇವು ಬಣ್ಣರಹಿತ ಪ್ಲಾಸ್ಟ್ ಗಳಾಗಿದ್ದು ಪಿಷ್ಟದ ಉತ್ಪಾದನೆ ಮತ್ತು ಸಂಗ್ರಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

6. ಎಲಿಯೊಪ್ಲಾಸ್ಟ್‌ : ಕೊಬ್ಬನ್ನು ಸಂಗ್ರಹಿಸಲು ಸಹಾಯಕವಾಗಿವೆ

7. ಪ್ರೋಟಿನೋಪ್ಲಾಸ್ಟ್‌ : ಪ್ರೋಟೀನ್ ಸಂಗ್ರಹಿಸಲು ಮತ್ತು ಮಾರ್ಪಡಿಸಲು ಸಹಾಯಕವಾಗಿವೆ

ಕಾಮೆಂಟ್‌ಗಳು