ಕೋಶ ವಿಭಜನೆ

 ಕೋಶ ವಿಭಜನೆ

ಪ್ರೋಕ್ಯಾರಿಯೋಟ್‌ ಜೀವಕೋಶಗಳಲ್ಲಿ ಕೋಶ ವಿಭಜನೆಯು ದ್ವಿವಿದಳನ ರೀತಿಯಲ್ಲಿ ನಡೆಯುತ್ತದೆ ಅಂದರೆ ಜೀವಕೋಶವೊಂದರ ಡಿಎನ್‌ಎ ನಕಲು ಆಗಿ ಹೊಸದೊಂದು ಜೀವಕೋಶ ಹುಟ್ಟುವುದು.

ಯೂಕ್ಯಾರಿಯೋ‍ಟ್‌ ಜೀವಕೋಶಗಳಲ್ಲಿ ಮೈಟಾಸಿಸ್‌ ಮತ್ತು ಮಿಯಾಸಿಸ್‌ ಎಂಬ ಎರಡು ವಿಧಗಳಲ್ಲಿ ಕೋಶವಿಭಜನೆಯಾಗುತ್ತದೆ. ಮೈಟಾಸಿಸ್ ದೇಹದ ಚರ್ಮ, ಅಂಗಾಂಗಗಳು, ನರಕೋಶಗಳು ಇತ್ಯಾದಿ ದೇಹದ ಭಾಗಗಳಲ್ಲಿ ಕಂಡುಬರುತ್ತವೆ. 

ಮೈಟಾಸಿಸ್

ಎಲ್ಲಾ ಜೀವಿಗಳ ಜೀವಕೋಶದಲ್ಲಿ ಕಂಡುಬರುವ ಕೋಶ ವಿಭಜನೆಗೆ ಮೈಟಾಸಿಸ್ ಅಥವಾ ಕಾಯಕೋಶ ವಿಭಜನೆ ಎಂದು ಹೆಸರು. ಮೈಟಾಸಿಸ್‌ ಪ್ರಕ್ರಿಯೆಯ ಮೂಲಕ ಕೋಶಕೇಂದ್ರವು ವಿಭಜನೆಯಾಗಿ ನಂತರ ಸೈಟೊಕೈನೆಸಿಸ್ ಪ್ರಕ್ರಿಯೆಯ ಮೂಲಕ ಜೀವಕೋಶ ವಿಭಜನೆಯಾಗುತ್ತದೆ. 

ಒಂದು ಜೀವ ಕೋಶವು ಮೈಟಾಸಿಸ್ ವಿಭಜನೆ ಹೊಂದಿ ಎರಡು ಮರಿ ಕೋಶಗಳು ಜನನವಾದಾಗ ಪ್ರತಿ ಮರಿ ಕೋಶವು ತಾಯಿ ಕೋಶದಲ್ಲಿದ್ದ ಸಂಖ್ಯೆಯ ವರ್ಣ ತಂತುವನ್ನು ಹೊಂದಿರುತ್ತದೆ. ಹಾಗಾಗಿ ಇದನ್ನು ಸಮವಿಭಾಜಕ ಕೋಶವಿಭಜನೆ ಎಂದು ಕರೆಯುತ್ತಾರೆ. 

ಜೀವಕೋಶಗಳಲ್ಲಿ ಮೈಟಾಸಿಸ್ ನಡೆಯುವ ಮೊದಲು ಹಾಗು ನಡೆಯುವಾಗ ಅನೇಕ ಚಟುವಟಿಕೆಗಳು ಉಂಟಾಗುತ್ತವೆ. ಅವುಗಳನ್ನು ಕೋಶಕೇಂದ್ರ ವಿಭಜನೆ (ಕ್ಯಾರಿಯೊಕೈನೆಸಿಸ್) ಮತ್ತು ಕೋಶರಸ ವಿಭಜನೆ (ಸೈಟೋಕೈನೆಸಿಸ್) ಎಂದು ಎರಡು ಪ್ರಮುಖ ಹಂತಗಳಾಗಿ ವಿಂಗಡಿಸಲಾಗಿದೆ.

ಮೈಟಾಸಿಸ್ ವಿಭಜನೆ ಪ್ರಾರಂಭವಾಗುವ ಮೊದಲು ಕೋಶವು ಕೆಲವು ಸಿದ್ಧತೆಗಳನ್ನು ಮಾಡಿಕೊಳ್ಳುತ್ತದೆ. ಈ ಹಂತವನ್ನು ಸಿದ್ದತಾ ಹಂತ ಅಥವಾ ಇಂಟರ್ ಫೇಸ್ ಎಂದು ಕರೆಯಲಾಗಿದೆ. ಸಿದ್ದತಾ ಹಂತದಲ್ಲಿ ಎಲ್ಲ ವರ್ಣ ತಂತುಗಳಲ್ಲಿರುವ ಡಿ.ಎನ್.ಎ ಅಣುವು ಸ್ವಪ್ರತೀಕರಣಗೊಳ್ಳುವುದು. ಇದು ಮುಂದಿನ ಪೀಳಿಗೆಯ ಜೀವಕೋಶಗಳಲ್ಲಿ ಅನುವಂಶಿಕ ವಸ್ತು ಸಮಾನಾಗಿ ವಿತರಿಸಲು ಸಹಾಯಕವಾಗಿರುತ್ತದೆ.

ಮೈಟಾಸಿಸ್ 4 ಹಂತಗಳಲ್ಲಿ ನಡೆಯುತ್ತದೆ.

ಈ ಕೋಶ ವಿಭಜನೆಯು ವೈರಸ್ ಒಂದನ್ನು ಹೊರತುಪಡಿಸಿ ಮಿಕ್ಕುಳಿದ ಎಲ್ಲಾ ಜೀವಿಗಳಲ್ಲೂ ನಡೆಯುತ್ತದೆ.

ಕೋಶಕೇಂದ್ರ ವಿಭಜನೆ

ಕೋಶ ವಿಭಜನೆಯು ಪ್ರೊಫೇಸ್ಮೆಟಾಫೇಸ್ಅನಾಫೇಸ್ ಮತ್ತು ಟೀಲೊಫೇಸ್ ಎಂಬ ನಾಲ್ಕು ಹಂತಗಳಲ್ಲಿ ನಡೆಯುತ್ತದೆ.

ಪ್ರೊಫೇಸ್

ಕೋಶಕೇಂದ್ರ ವಿಭಜನೆಯ ಅವಧಿಯಲ್ಲಿ ಪ್ರೊಫೇಸ್ ಹಂತವು ಹೆಚ್ಚು ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ. ಈ ಸಮಯದಲ್ಲಿ ಸೆಂಟ್ರಿಯೊಲ್ಗಳು ಎರಡು ಧ್ರುವಗಳತ್ತ ದೂರ ಸರಿಯುತ್ತವೆ. ಅವುಗಳ ಸುತ್ತಲು ಸಣ್ಣ ಎಳೆಗಳು ಕೋಶರಸದಿಂದ ಉತ್ಪತ್ತಿಯಾಗುತ್ತವೆ ಇವುಗಳಿಗೆ ಆಸ್ಟೆರ್ ಗಳು ಎನ್ನುವರು. ಇವೆರಡರ ಮಧ್ಯೆ ಉದ್ದವಾದ ಕೋಶರಸ ಎಳೆಗಳು ಕಾಣಿಸಿಕೊಳ್ಳುತ್ತವೆ. ಈ ಕ್ರಿಯೆ ನಡೆಯುವಾಗ ಕಿರು ಕೋಶಕೇಂದ್ರ ಹಾಗು ಕೋಶಪೊರೆ ಅದೃಶ್ಯವಾಗುತ್ತದೆ.

ಮೆಟಾಫೇಸ್

ಇದು ಕೋಶಕೇಂದ್ರ ವಿಭಜನೆಯ ಅತ್ಯಂತ ಸಂಕ್ಷಿಪ್ತ ಹಂತ. ಈ ಹಂತದಲ್ಲಿ ವರ್ಣತಂತುಗಳ ಸಂಖ್ಯೆಆಕಾರರೂಪ ಮುಂತಾದವುಗಳನ್ನು ವೀಕ್ಷಿಸಬಹುದು. ಈ ಹಂತದಲ್ಲಿ ವರ್ಣತಂತುಗಳು ಕೋಶದ ಮಧ್ಯ ಭಾಗಕ್ಕೆ ಚಲಿಸಿ ಅಲ್ಲಿ ಜೋಡಣೆಗೊಳ್ಳುತ್ತವೆ. ಇದಕ್ಕೆ ಸಮಾನಾಂತರ ಫಲಕ ಎಂದು ಹಸರು. ವರ್ಣತಂತುಗಳು ಕದಿರು ಎಳೆಗಳಿಗೆ ಬಂಧಿಸಲ್ಪಟ್ಟಿರುತ್ತದೆ.

ಅನಫೇಸ್

ಈ ಹಂತದಲ್ಲಿ ಸೆಂಟ್ರೊಮಿಯರ್ ಎರಡಾಗಿ ವಿಭಜನೆ ಹೊಂದುತ್ತದೆ. ಆ ಎರಡು ತಂತುಗಳು ಬೇರ್ಪಟ್ಟು ವಿರುದ್ಧ ದಿಕ್ಕಿನಲ್ಲಿ ಚಲಿಸಲು ಪ್ರಾರಂಭವಾಗುತ್ತದೆ.  ಹೀಗೆ ವಿರುದ್ಧ ದಿಕ್ಕಿಗೆ ತೆರಳುವ ವರ್ಣ ತಂತುಗಳ ಎರಡು ತಂಡಗಳ ಮಧ್ಯೆ ಹೊಸ ರೀತಿಯ ಕೋಶರಸದ ಎಳೆಗಳು ಕಾಣಿಸಿಕೊಳ್ಳುತ್ತವೆ. ಇವುಗಳಿಗೆ ಅಂತರ್ವಲಯಗಳು ಎಂದು ಹೆಸರು.

ಟಿಲೋಫೇಸ್

ಇದು ಕೋಶಕೇಂದ್ರ ವಿಭಜನೆಯ ಕೊನೆಯ ಹಂತ. ಈ ಹಂತದಲ್ಲಿ ಕೋಶದ ಪ್ರತಿ ಧ್ರುವ ಪ್ರದೇಶದಲ್ಲಿ ಒಂದು ಹೊಸ ಮರಿ ಕೋಶಕೇಂದ್ರ ರಚನೆಯಾಗುತ್ತದೆ. ವಿರುದ್ಧ ದಿಕ್ಕಿನ ಧ್ರುವಗಳತ್ತ ತೆರಳಿದ ವರ್ಣ ತಂತುಗಳ ಎಳೆಗಳು ಮತ್ತೆ ಪರಸ್ಪರ ಸುತ್ತಿಕೊಂಡು ವರ್ಣ ಗ್ರಾಹಕ ಜಾಲವಾಗುತ್ತದೆ. ಈ ಜಾಲದ ಸುತ್ತಲೂ ಹೊಸ ಕೋಶಕೇಂದ್ರ ಪೊರೆ ಹಾಗೂ ವರ್ಣಗ್ರಾಹಕ ಜಾಲದಲ್ಲಿ ಹೊಸ ಕಿರು ಕೋಶಕೇಂದ್ರ ರಚನೆಯಾಗುತ್ತದೆ. 

ಎಲ್ಲಾ ವಿಧದಲ್ಲೂ ಪರಸ್ಪರ ಹೋಲುವ ಒಂದೇ ಸಂಖ್ಯೆಯ ವರ್ಣ ತಂತುಗಳಿರುವ ಎರಡು ಮರಿ ಕೋಶಕೇಂದ್ರಗಳು ಉಂಟಾಗುತ್ತವೆ. ಕೋಶರಸದಲ್ಲಿದ್ದ ಎಲ್ಲಾ ಎಳೆಗಳು ಅದೃಶ್ಯವಾಗುತ್ತವೆ. ಹೀಗೆ ಟೀಲೋಫೇಸ್ ಕೊನೆಗೊಂಡು ಕೋಶಕೇಂದ್ರ ವಿಭಜನೆ ಪೂರ್ಣಗೊಳ್ಳುತ್ತದೆ. ಈ ಕೋಶಕೇಂದ್ರ ವಿಭಜನೆಗೆ ಕ್ಯಾರಿಯೊಕೈನೆಸಿಸ್ ಎಂದು ಹೆಸರು.

ಕೋಶರಸ ವಿಭಜನೆ

ಪ್ರಾಣಿಕೋಶಗಳಲ್ಲಿ ಕೋಶದ ಮಧ್ಯ ಭಾಗವು ಹೊರಗಿನಿಂದ ಒಳಗೆ ಕ್ರಮೇಣ ಸಂಪೀಡನೆಗೊಂಡು ಎರಡಾಗಿ ಕತ್ತರಿಸುತ್ತದೆ. ಕೋಶವು ಸೀಳಿ ಎರಡು ಮರಿ ಕೋಶಗಳಾಗುತ್ತವೆ. ಈ ಸಮಯದಲ್ಲಿ ಕೋಶರಸವು ವಿಭಜನೆಯಾಗುವುದು. ಕೋಶರಸ ವಿಭಜನೆಗೆ ಸೈಟೊಕೈನೆಸಿಸ್ ಎಂದು ಹೆಸರು. 

ಮೈಟಾಸಿಸ್ ಕೋಶ ವಿಭಜನೆಯಿಂದ ಜನಿಸುವ ಎರಡು ಮರಿ ಕೋಶಗಳಲ್ಲಿ ಸಮಾನಾಂತರ ವರ್ಣತಂತುಗಳ ಸಂಖ್ಯೆ ತಾಯಿ ಕೋಶದಲ್ಲಿದ್ದಷ್ಟೆ ಇರುವುದು. ಈ ಸಂಖ್ಯೆಗೆ ದ್ವಿಗುಣಿತ ಸಂಖ್ಯೆ ಅಥವಾ ಡಿಪ್ಲಾಯಿಡ್ ಎಂದು ಹೆಸರು. ಈ ಸಂಖ್ಯೆಯನ್ನು 2n ಎಂಬ ಸಂಕೇತದಿಂದ ಸೂಚಿಸುವರು.

ಮಿಯಾಸಿಸ್

ಮಿಯಾಸಿಸ್ ಕೋಶವಿಭಜನೆಯಲ್ಲಿ ಲೈಂಗಿಕ ಜೀವಕೋಶಗಳು ವಿಭಜನೆಗೆ ಒಳಗಾಗುತ್ತವೆ. ಇಲ್ಲಿ ತಾಯಿ ಜೀವಕೋಶದಲ್ಲಿರುವ ವರ್ಣತಂತುಗಳ ಸಂಖ್ಯೆ ಮುಂದೆ ಹುಟ್ಟುವ ಜೀವಕೋಶಗಳಲ್ಲಿ ಕಡಿಮೆಯಾಗುತ್ತ ಹೋಗುತ್ತದೆ. ಆದ್ದರಿಂದ ಮಿಯಾಸಿಸ್ ಗೆ ಸಂಖ್ಯಾ ಕ್ಷೀಣ ವಿಭಜನೆ ಎಂದು ಹೆಸರು. ಈ ವಿಭಜನೆಯನ್ನು ಟಿ ಎಂಬ ಸಂಕೇತದಿಂದ ಗುರುತಿಸಲಾಗುವುದು. ಮಿಯಾಸಿಸ್ 8 ಹಂತಗಳಲ್ಲಿ ನಡೆಯುತ್ತದೆ.

ಮಿಯಾಸಿಸ್ ವಿಭಜನೆಯ ಹಂತಗಳು

ಮಿಯಾಸಿಸ್ ಎರಡು ವಿಭಜನೆಗಳನ್ನು ಒಳಗೊಂಡಿದೆ. ಮೊದಲನೆಯ ವಿಭಜನೆಯನ್ನು ಮಿಯಾಸಿಸ್ 1 ಮತು ಎರಡನೆಯ ವಿಭಜನೆಯನ್ನು ಮಿಯಾಸಿಸ್ 2 ಎಂದು ಕರೆಯುತ್ತಾರೆ. ಮಿಯಾಸಿಸ್ 1 ರಲ್ಲಿ ವರ್ಣ ತಂತುಗಳ ದ್ವಿಗುಣಿತ ಸಂಖ್ಯೆ ಏಕಗುಣಿತ ಸಂಖ್ಯೆಯಾಗಿ ಪರಿವರ್ತನೆಗೊಳ್ಳುವುದು. ಅಂದರೆ 2N ಸಂಖ್ಯೆ N ಆಗುವುದು. ಮಿಯಾಸಿಸ್ 1 ರಲ್ಲಿ ಕೋಶಕೇಂದ್ರ ವಿಭಜನೆ ಹಾಗೂ ಕೋಶರಸ ವಿಭಜನೆ ಎಂಬ ಎರಡು ಹಂತಗಳಿವೆ.

ಮಿಯಾಸಿಸ್ 1

ಈ ವಿಭಜನೆಯನ್ನು ಪ್ರೊಫೇಸ್ 1, ಮೆಟಾಫೇಸ್ 1, ಅನಫೇಸ್ 1, ಮತ್ತು ಟೀಲೋಫೇಸ್ 1 ಎಂಬ ನಾಲ್ಕು ಹಂತಗಳನ್ನು ಗುರುತಿಸಲಾಗಿದೆ. ಈ ವಿಭಜನೆಯ ಕೊನೆಯಲ್ಲಿ ಉತ್ಪತ್ತಿಯಾಗುವ ಮರಿಕೋಶಗಳಲ್ಲಿ ಏಕಗುಣಿತ ವರ್ಣತಂತುಗಳಿರುತ್ತವೆ.

ಪ್ರೊಫೇಸ್ 1

ಈ ಹಂತದಲ್ಲಿ ಕೋಶಕೇಂದ್ರದಲ್ಲಿರುವ ವರ್ಣಗ್ರಾಹಕ ಜಾಲವು ಸುರುಳಿಗೊಂಡು ದಪ್ಪನಾದ ವರ್ಣತಂತುಗಳಾಗಿ ಮಾರ್ಪಾಡಾಗುತ್ತದೆ. ಕಿರು ಕೋಶ ಕೇಂದ್ರವು ಅದೃಶ್ಯವಾಗುತ್ತದೆ. ಕೋಶ ಕೇಂದ್ರದ ಪೊರೆಯು ಶಿಥಿಲವಾಗಿ ಮಾಯವಾಗುತ್ತದೆ. ಕದಿರು ಎಳೆಗಳು ರಚನೆಯಾಗುತ್ತವೆ.

ಮೆಟಾಫೇಸ್ 1

ಈ ಹಂತದಲ್ಲಿ ವರ್ಣತಂತುಗಳು ಕೋಶದ ಸಮಭಾಜಕ ಸಮತಲಕ್ಕೆ ಚಲಿಸುತ್ತವೆ. ಈ ಸಮಭಾಜಕ ಸಮತಲದ ಎರಡು ಬದಿಗೆ ಸಮರೂಪಿ ವರ್ಣ ತಂತುಗಳ ಎರಡು ತಂಡಗಳು ನೆಲೆಸುತ್ತವೆ. ಸೆಂಟ್ರಿಯೋಲ್ ಗಳ ಕದಿರೆಗಳು ವರ್ಣತಂತುಗಳನ್ನು ಹಿಡಿದಿಟ್ಟುಕೊಳ್ಳುತ್ತವೆ.

ಅನಫೇಸ್ 1

ಈ ಹಂತದಲ್ಲಿ ವರ್ಣತಂತುಗಳ ಎರಡು ತಂಡಗಳು ವಿರುದ್ಧ ದಿಕ್ಕುಗಳಿಗೆ ಚಲಿಸುತ್ತವೆ. ಆದರೆ ಎರಡು ಕ್ರೊಮ್ಯಾಟಿಡ್ ಗಳನ್ನು ಹಿಡಿದುಕೊಂಡಿರುವ ಸೆಂಟ್ರೊಮಿಯರ್ ವಿಭಜನೆಯಾಗುವುದಿಲ್ಲ. ಇಲ್ಲಿ ವರ್ಣ ತಂತುಗಳು ಏಕಗುಣಿತ ತಂಡಗಳಾಗಿ ಬೇರ್ಪಡುತ್ತವೆ. ಒಂದೊಂದು ಏಕಗುಣಿತ ವರ್ಣತಂತುಗಳ ತಂಡ ಒಂದೊಂದು ಧ್ರುವವನ್ನು ಸೇರುತ್ತವೆ.

ಟೀಲೊಫೇಸ್ 1

ಈ ಹಂತದಲ್ಲಿ ಸಮಾನಾಂತರ ವರ್ಣತಂತುಗಳು ವಿರುದ್ದ ಧ್ರುವಗಳನ್ನು ಸೇರುತ್ತವೆ. ಇವು ಏಕಗುಣಿತವಾಗಿದ್ದರೂ ಕ್ರೊಮ್ಯಾಟಿಡ್ ಗಳು ಬೇರ್ಪಟ್ಟಿರುವುದಿಲ್ಲ. ಅಡ್ಡಹಾಯುವಿಕೆಯಿಂದಾಗಿ ಇವು ಒಂದೇ ರೀತಿಯ ಜೀನ್ ಗಳನ್ನು ಹೊಂದಿರುವುದಿಲ್ಲ. ಈ ಕ್ರೊಮ್ಯಾಟಿಡ್ ಗಳನ್ನು ಬೇರ್ಪಡಿಸಲು ಮಿಯಸಿಸ್ 2 ವಿಭಜನೆ ನಡೆಯುವುದು. ಪ್ರತಿಯೊಂದು ಮರಿಕೋಶದ ಎರಡೂ ಧ್ರುವಗಳಲ್ಲಿರುವ ವರ್ಣತಂತುಗಳು ಸುರುಳಿ ಬಿಚ್ಚಿಕೊಂಡು ನೀಳವಾದ ತೆಳುವಾದ DNA ಆಗಿ ಪರಿವರ್ತನೆಗೊಳ್ಳುತ್ತವೆ. ಕೋಶ ಕೇಂದ್ರದ ಪೊರೆ ಪುನರ್ರಚಿತವಾಗುತ್ತದೆ. ಎರಡೂ ಧ್ರುವಗಳಲ್ಲೂ ಕಿರುಕೋಶಕೇಂದ್ರಗಳು ರೂಪುಗೊಳ್ಳುತವೆ. 

ಹೀಗೆ ಎರಡು ಕೋಶಕೇಂದ್ರಗಳು ರೂಪುಗೊಳ್ಳುತ್ತಿದ್ದಂತೆ ಕೋಶ ರಸ ವಿಭಜನೆ ಉಂಟಾಗಿ ಎರಡು ಏಕಗುಣಿತ ಮರಿಕೋಶಗಳು ರೂಪುಗೊಳ್ಳುತ್ತವೆ. ಹೊಸದಾಗಿ ರೊಪುಗೊಂಡ ಎರಡು ಏಕಗುಣಿತ ಮರಿಕೋಶಗಳಲ್ಲಿ ಮಿಯಾಸಿಸ್ 2 ಏಕಕಾಲದಲ್ಲಿ ಪ್ರಾರಂಭವಾಗುತ್ತದೆ.

ಮಿಯಾಸಿಸ್ 2

ಈ ವಿಭಜನೆಯಲ್ಲಿಯೂ ಕೋಶ ಕೇಂದ್ರ ವಿಭಜನೆ ಮತ್ತು ಕೋಶ ರಸ ವಿಭಜನೆ ಎಂಬ ಎರಡು ವಿಧಗಳಿವೆ. ಮಿಯಸಿಸ್ ಎರಡರ ಕೋಶ ಕೇಂದ್ರ ವಿಭಜನೆಯಲ್ಲಿ ಪ್ರೊಫೇಸ್ 2, ಮೆಟಾಫೇಸ್ 2, ಅನಫೇಸ್ 2, ಮತ್ತು ಟೀಲೊಫೇಸ್ 2 ಎಂಬ ನಾಲ್ಕು ಹಂತಗಳಿವೆ.

ಪ್ರೊಫೇಸ್ 2

ಈ ಹಂತದಲ್ಲ್ಲಿ ಜರುಗುವ ಬದಲಾವಣೆಗಳು ಮೈಟಾಸಿಸ್ ಪ್ರೊಫೇಸ್ ನಂತಯೇ ಇರುತ್ತದೆ.. ಎರಡು ಧ್ರುವಗಳಲ್ಲಿರುವ ಆಸ್ಟರ್ ಗಳ ನಡುವೆ ಕದಿರು ಎಳೆಗಳು ರೂಪುಗೊಳ್ಳುತ್ತವೆ. ಕೋಶಕೆಂದ್ರದ ಪೊರೆ ಅದೃಶ್ಯವಾಗುತ್ತದೆ. ವರ್ಣತಂತುಗಳು ಸ್ವತಂತ್ರವಾಗಿ ಕೋಶರಸದಲ್ಲಿ ಹರಡಿಕೊಳ್ಳುತ್ತವೆ.

ಮೆಟಾಫೇಸ್ 2

ಈ ಹಂತದಲ್ಲಿ ವರ್ಣತಂತುಗಳು ಸಮಭಾಜಕ ರೇಖೆಯತ್ತ ಬಂದು ನೆಲೆಸುತ್ತವೆ. ಕದಿರೆಳೆಗಳು ಸೆಂಟ್ರೋಮಿಯರ್ ಗೆ ಅಂಟಿಕೊಳ್ಳುತ್ತವೆ.

ಅನಫೇಸ್ 2

ಇಲ್ಲಿ ಸೆಂಟ್ರೋಮಿಯರ್ ಗಳು ಎರಡು ಭಾಗವಾಗಿ ವಿಭಜಿಸುವುದರಿಂದ ಕ್ರೊಮ್ಯಾಟಿಡ್ ಗಳು ಸಂಪೂರ್ಣವಾಗಿ ಬೇರ್ಪಡುತ್ತವೆ. ಈ ರೀತಿ ಬೇರ್ಪಡೆಯಾದ ವರ್ಣ ತಂತುಗಳು ವಿರುದ್ಧ ಧ್ರುವಗಳಿಗೆ ಚಲಿಸುತ್ತವೆ.

ಟೀಲೊಫೇಸ್ 2

ಈ ಹಂತದಲ್ಲಿ ಕೋಶ ಕೇಂದ್ರ ಪುನರ್ರಚನೆಯಾಗುತ್ತದೆ. ಕದಿರೆಳೆಗಳು ಸಹ ಮಾಯವಾಗುತ್ತದೆ. ಕೋಶಪೊರೆ ರಚನೆಯಾಗುತ್ತದೆ. ಕೋಶರಸದ ವಿಭಜನೆ ಉಂಟಾಗಿ ನಾಲ್ಕು ಏಕಗುಣಿತ ಮರಿಕೋಶಗಳು ಉಂಟಾಗುತ್ತವೆ.

ಕಾಮೆಂಟ್‌ಗಳು