ಜೀವಕೋಶ

ಜೀವಕೋಶ

ಜೀವಕೋಶಗಳನ್ನು ಕಂಡುಹಿಡಿದವನು ರಾಬರ್ಟ್ ಹುಕ್, ಮುಂದೆ 1839ರಲ್ಲಿ ಜರ್ಮನಿಯ ಶ್ಲೀಡನ್ ಮತ್ತು ಷ್ವಾನ್ ಎಂಬ ವಿಜ್ಞಾನಿಗಳು ಜೀವಕೋಶ ಸಿದ್ಧಾಂತವನ್ನು ಮಂಡಿಸಿದರು.

ಜೀವಕೋಶದ ಕುರಿತಾದ ಅಧ್ಯಯನವನ್ನು ಸೈಟಾಲಜಿ ಎನ್ನುವರು, ಜೀವಕೋಶಗಳನ್ನು ಅಳತೆ ಮಾಡಲು ಬಳಸುವ ಸಾಧನ ಸೈಟೋಮೀಟರ್.

ಜೀವಕೋಶಗಳು ಸಾಮಾನ್ಯವಾಗಿ ಒಂದು ಮೈಕ್ರಾನ್ ಗಾತ್ರದಲ್ಲಿರುತ್ತವೆ. ಒಂದು ಮೈಕ್ರಾನ್ ಎಂದರೆ ಒಂದು ಮಿಲಿಮೀಟರ್ ಅನ್ನು ಸಾವಿರ ಭಾಗ ಮಾಡಿದಾಗ ಅದರಲ್ಲಿನ ಒಂದು ಭಾಗ.

ಜೀವಿಯ ದೇಹದಲ್ಲಿರುವ ಜೀವಕೋಶಗಳು ವಿವಿಧ ಉದ್ದೇಶಗಳಿಗೆ ಅನುಗುಣವಾಗಿ ವಿವಿಧ ರೀತಿಯಲ್ಲಿ ರೂಪುಗೊಂಡಿರುತ್ತವೆ. ಉದಾ ನರಕೋಶಗಳು ಮೆದುಳಿನಿಂದ ಸಂದೇಶಗಳನ್ನು ದೇಹದ ವಿವಿಧ ಭಾಗಗಳಿಗೆ ಸಾಗಿಸುವ ಕೆಲಸ ಮಾಡಿದರೆ, ಕೆಂಪುರಕ್ತಕಣಗಳು ಆಮ್ಲಜನಕವನ್ನು ಸಾಗಿಸುವ ಕೆಲಸ ಮಾಡುತ್ತವೆ.

ಪ್ರೋಕ್ಯಾರಿಯೋಟ್‌ ಮತ್ತು ಯೂಕ್ಯಾರಿಯೋ‍ಟ್‌‌‌ ಜೀವಕೋಶಗಳು

ಪ್ರೋಕ್ಯಾರಿಯೋಟ್‌ ಜೀವಕೋಶಗಳು ಭೂಮಿಯ ಮೇಲೆ ಕಂಡುಬಂದ ಮೊದಲ ಜೀವದ ಸ್ವರೂಪಗಳು. ಇವು ಯುಕ್ಯಾರಿಯಟ್ ಜೀವಕೋಶಗಳಿಗಿಂತ ಸರಳ ಮತ್ತು ಸಣ್ಣವು. ಬ್ಯಾಕ್ಟೀರಿಯ ಮತ್ತು ಆರ್ಕಿಯಾಗಳು ಪ್ರೋಕ್ಯಾರಿಯೋಟ್‌ಗಳಲ್ಲಿ ಕಂಡುಬರುವ ಜೀವಿಗಳಾಗಿವೆ. ಪ್ರೊಕ್ಯಾರಿಯಟ್‌ಗಳ ಗಾತ್ರ 0.5 ದಿಂದ 2.0 ಮೈಕ್ರಾನ್ ಇರುತ್ತದೆ. 

ಸಸ್ಯಗಳು, ಪ್ರಾಣಿಗಳು, ಶಿಲೀಂಧ್ರಗಳು, ಲೋಳೆ ಜೀವಿಗಳು, ಪ್ರೋಟೋಜೋವಗಳು ಮತ್ತು ಪಾಚಿಗಳೆಲ್ಲವೂ ಯೂಕ್ಯಾರಿಯೋ‍ಟ್‌‌‌ ಜೀವಕೋಶಗಳಿಂದಾಗಿವೆ. ಇವು ಪ್ರೋಕ್ಯಾರಿಯೋಟ್‌ ಜೀವಕೋಶಗಳಿಗಿಂತ ದೊಡ್ಡವು.

ಪ್ರೋಕ್ಯಾರಿಯೋಟ್‌ಗಳು ಮತ್ತು ಯೂಕ್ಯಾರಿಯೋ‍ಟ್‌‌‌ಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಪ್ರೊಕ್ಯಾರಿಯೋಟ್ ಜೀವಕೋಶದ ಕೋಶರಸದಲ್ಲಿ ಡಿ.ಎನ್‌.ಎ, ರೈಬೋಸೋಮ್‌ಗಳು ಮತ್ತು ಇತರ ಕೆಲವು ಕಣದಂಗಗಳಿರುತ್ತವೆ ಆದರೆ ಕೋಶಕೇಂದ್ರವಿರುವುದಿಲ್ಲ. ಪ್ರೊಕ್ಯಾರಿಯೋಟ್ ಜೀವಕೋಶದ ಕೋಶರಸದಲ್ಲಿರುವ ಡಿ.ಎನ್‌.ಎ ಯಾವ ವಸ್ತುವಿಗೂ ಅಂಟಿಕೊಂಡಿರದೆ ಸ್ವತಂತ್ರವಾಗಿರುತ್ತದೆ. ಕೋಶರಸದಲ್ಲಿ ಸ್ವತಂತ್ರವಾಗಿರುವ ವರ್ಣತಂತುಗಳಲ್ಲದೆ ಬೇರೆ ಡಿ.ಎನ್‌.ಎ ಸಹ ಇದ್ದು ಇದು ಪ್ಲಾಸ್ಮಿಡ್‌ಗಳಲ್ಲಿ ಕಂಡುಬರುತ್ತದೆ. ಇವು ಯಾಂಟಿಬಯಾಟಿಕ್‌ ಅಥವಾ ರೋಗನಿರೋಧಕಶಕ್ತಿ ಹೊಂದಿರುವ ವರ್ಣತಂತುಗಳಾಗಿವೆ. 

ಯೂಕ್ಯಾರಿಯೋಟ್‍ಗಳು ಕೋಶಕೇಂದ್ರವನ್ನು ಹೊಂದಿದ್ದು ಆ ಕೋಶಕೇಂದ್ರವು ತನ್ನೊಳಗೆ ವರ್ಣತಂತುಗಳನ್ನು ಹೊಂದಿರುತ್ತದೆ. ವರ್ಣತಂತುಗಳ ಒಳಗಿನ ಡಿ.ಎನ್‌.ಎ ಹಿಸ್ಟೋನ್‌ ಎಂಬ ಪ್ರೋಟೀನ್‌ನಿಂದಾಗಿದೆ. ಕೋಶಕೇಂದ್ರದಂತೆ ಮೈಟೊಕಾಂಡ್ರಿಯ ಸಹ ಡಿ.ಎನ್‌.ಎ ಒಳಗೊಂಡಿರುತ್ತದೆ.

ಕೆಲವು ಪ್ರೋಕ್ಯಾರಿಯೋಟ್‌ ಜೀವಕೋಶಗಳ ಹೊರಮೈ ಮೇಲೆ ಕಶಾಂಗ ಮತ್ತು ಪೈಲಸ್‌ನಂತಹ ಎಳೆಗಳಿದ್ದು ಈ ರಚನೆಗಳು ಪ್ರೋಟೀನ್‌ನಿಂದಾಗಿವೆ ಮತ್ತು ಜೀವಕೋಶಗಳ ಚಲನೆ ಮತ್ತು ಅವುಗಳ ನಡುವೆ ಸಂವಹನೆಗೆ ಸಹಾಯಕವಾಗಿವೆ. 

ಹಲವು ಯೂಕ್ಯಾರಿಯೋ‍ಟ್‌‌‌ ಜೀವಕೋಶಗಳಿಗೆ ಸೀಲಿಯಂಗಳು ಇರುತ್ತವೆ.  ಈ ಪ್ರಾಥಮಿಕ ಸೀಲಿಯಂಗಳು ರಸಾಯನಿಕ ಸಂವೇದನೆ, ಯಂತ್ರಸಂವೇದನೆ ಮತ್ತು ತಾಪಸಂವೇದನೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹೀಗಾಗಿ ಸೀಲಿಯಂಗಳನ್ನು ಜೀವಕೋಶಗಳ ಸಂವೇದನೆಯ ಸ್ಪರ್ಷಕ ಅಥವಾ ಯಾಂಟೆನ ಎನ್ನಬಹುದು. ಕೆಲವು ಚಲಿಸುವ ಯೂಕ್ಯಾರಿಯೋ‍ಟ್‌‌‌ ಜೀವಕೋಶಗಳು ಸೀಲಿಯಂ ಅಥವಾ ಕಶಾಂಗಗಳನ್ನು ಬಳಸಿ ಚಲಿಸುತ್ತವೆ.

ಪ್ರಾಣಿ ಜೀವಕೋಶ ಮತ್ತು ಸಸ್ಯ ಜೀವಕೋಶ

ಜೀವಕೋಶದ ಭಾಗಗಳು

ಕೋಶಪೊರೆ

ಕೋಶಪೊರೆಯನ್ನು ಪ್ಲಾಸ್ಮಾಪೊರೆ ಎಂತಲೂ ಕರೆಯುವರು. ಜೀವಕೋಶವು ಎರಡು ಪದರಗಳ ಪ್ರೊಟೀನ್, ಕಾರ್ಬೋಹೈಡ್ರೇಟ್ ಮತ್ತು ಫಾಸ್ಪೊಲಿಪಿಡ್‌ಗಳಿಂದ ರೂಪುಗೊಂಡಿದೆ ಎಂಬುದನ್ನು ತಿಳಿಸುವ ಸಿದ್ಧಾಂತವೇ ಫ್ಲ್ಯೂಯಿಡ್ ಮೊಸಾಯಿಕ್ ಸಿದ್ಧಾಂತ. ಎಸ್.ಜೆ ಸಿಂಗರ್ ಮತ್ತು ಜಿ.ಎಲ್ ನಿಕೊಲ್ಸನ್ ಈ ಸಿದ್ಧಾಂತವನ್ನು ಮಂಡಿಸಿದರು. ಇದು ಜೀವಕೋಶಕ್ಕೆ ಆಕಾರವನ್ನು ಕೊಡುವುದಲ್ಲದೇ ಜೀವಕೋಶದಿಂದ ಹೊರಹೋಗುವ ಮತ್ತು ಜೀವಕೊಶದೊಳಗೆ ಬರುವ ವಸ್ತುಗಳ ಸಂಶ್ಲೇಷಣೆ, ನಿಯಂತ್ರಣ ಇತ್ಯಾದಿ ಕಾರ್ಯಗಳನ್ನು ಮಾಡುತ್ತದೆ. ಆದ್ದರಿಂದ ಇದನ್ನು ಅರೆಪಾರಕ ಪೊರೆ ಎಂದು ಕರೆಯುವರು.

ಕೋಶಪೊರೆಯ ಮೂಲಕ ಜೀವಕೋಶದ ಒಳಹೋಗುವ ಮತ್ತು ಹೊರಬರುವ ವಸ್ತುಗಳ ಚಲನೆ 3 ರೀತಿಯದ್ದಾಗಿರುತ್ತದೆ.

ವಿಸರಣೆ : ಅಣುಗಳು (ವಸ್ತುಗಳು) ಹೆಚ್ಚಿನ ಸಾರತೆಯ ಪ್ರದೇಶದಿಂದ ಕಡಿಮೆ ಸಾರತೆಯ ಪ್ರದೇಶದೆಡೆಗೆ ಚಲಿಸುವುದನ್ನು ವಿಸರಣೆ ಎನ್ನುವರು.

ಅಭಿಸರಣೆ : ಅಣುಗಳು (ವಸ್ತುಗಳು) ಅರೆಪಾರಕ ಪೊರೆಯ ಮೂಲಕ ಹೆಚ್ಚಿನ ಸಾರತೆಯ ಪ್ರದೇಶದಿಂದ ಕಡಿಮೆ ಸಾರತೆಯ ಪ್ರದೇಶದೆಡೆಗೆ ಚಲಿಸುವುದನ್ನು ಅಭಿಸರಣೆ ಎನ್ನುವರು.

ಕ್ರಿಯಾತ್ಮಕ ಸಾಗಾಣಿಕೆ : ಕೆಲವೊಮ್ಮೆ ಅಣುಗಳು (ವಸ್ತುಗಳು) ಕಡಿಮೆ ಸಾರತೆಯ ಪ್ರದೇಶದಿಂದ ಹೆಚ್ಚಿನ ಸಾರತೆಯ ಪ್ರದೇಶದೆಡೆಗೆ ಸಾಗುತ್ತವೆ ಇದನ್ನೇ ಕ್ರಿಯಾತ್ಮಕ ಸಾಗಾಣಿಕೆ ಎನ್ನುವರು. 

ಉದಾ. ಹೃದಯದ ಸ್ನಾಯುಗಳಲ್ಲಿ ಸೋಡಿಯಂನ ಪ್ರಮಾಣ ರಕ್ತದಲ್ಲಿರುವುದಕ್ಕಿಂತ ಹೆಚ್ಚಾಗಿ ಇದ್ದರೂ ಕೆಲವೊಮ್ಮೆ ಅದು ರಕ್ತದಿಂದ ಸೋಡಿಯಂ ಅನ್ನು ಹೀರಿಕೊಳ್ಳುತ್ತದೆ.

ಕೋಶಭಿತ್ತಿ

ಜೀವಕೋಶದ ಕೋಶಪೊರೆಯ ಸುತ್ತಲೂ ದಪ್ಪನೆಯ ಗಡುಸಾದ ಹೊದಿಕೆಯಂತೆ ಆವರಿಸಿಕೊಂಡಿರುತ್ತದೆ. ಜೀವಕೋಶಕ್ಕೆ ಆಕಾರ ಮತ್ತು ಆಧಾರ ನೀಡುವ ಇದು ಪಾರಕ ಪೊರೆಯಾಗಿದೆ. ಜೀವಕೋಶ ಹೈಪೋಟೋನಿಕ್ (ಹೈಪೋಟೋನಿಕ್ ಪರಿಸರ ಎಂದರೆ ಹೊರಗಿನ ವಾತಾವರಣದಲ್ಲಿ ಇರುವ ನೀರಿನ ಅಂಶಕ್ಕಿಂತ ಜೀವಕೋಶದೊಳಗೆ ನೀರಿನ ಅಂಶ ಹೆಚ್ಚಾಗುವಿಕೆ)  ಸ್ಥಿತಿಯಲ್ಲಿದ್ದಾಗ ಆಸ್ಮೋಸಿಸ್ ಒತ್ತಡದ ಪರಿಣಾಮವಾಗಿ ಹಿಗ್ಗುವುದನ್ನು ಮತ್ತು ಸಿಡಿಯುವುದನ್ನು ಕೋಶಭಿತ್ತಿ ತಡೆಹಿಡಿಯುತ್ತದೆ. ಬೇರೆ ಬೇರೆ ಜೀವಕೋಶಗಳ ಕೋಶಭಿತ್ತಿ ವಿಭಿನ್ನ ಪದಾರ್ಥಗಳಿಂದ ಮಾಡಲ್ಪಟ್ಟಿರುತ್ತದೆ.

ಉದಾ.. ಸಸ್ಯಗಳ ಕೋಶಭಿತ್ತಿ ಸೆಲ್ಯೂಲೋಸ್‌ನಿಂದ, ಶಿಲೀಂಧ್ರದ ಕೋಶಭಿತ್ತಿ ಚಿಟಿನ್‌ನಿಂದ ಮತ್ತು ಬ್ಯಾಕ್ಟೀರಿಯದ ಕೋಶಭಿತ್ತಿ ಪೆಪ್ಟಿಡೊಗ್ಲೈ‌ಕಾನ್‌ನಿಂದ ಮಾಡಲ್ಪಟ್ಟಿರುತ್ತದೆ.

ಕೆಲವು ಬ್ಯಾಕ್ಟೀರಿಯಗಳಲ್ಲಿ ಮೂರನೆಯ ಪದರ ಕ್ಯಾಪ್ಸೂಲ್ (ಜಿಲಿಟಿನ್ ಕವಚ) ಸಹ ಇರುತ್ತದೆ. ಮೈಕೋಪ್ಲಾಸ್ಮ (ಬ್ಯಾಕ್ಟೀರಿಯ) ಮತ್ತು ಥರ್ಮೋಪ್ಲಾಸ್ಮಗಳಲ್ಲಿ (ಅರ್ಕಿಯ) ಕೇವಲ ಕೋಶಪೊರೆ ಮಾತ್ರ ಇರುತ್ತದೆ.

ಕೋಶದ್ರವ್ಯ

ಜೀವಕೋಶದ ಒಳಗೆ ಕಂಡುಬರುವ ದ್ರವರೂಪದ ವಸ್ತುವಾಗಿದ್ದು 80% ನೀರನ್ನು ಉಳಿದ 20% ಪಿಷ್ಟ, ಕೊಬ್ಬು, ಕ್ಯಾಲ್ಷಿಯಂ ಕಾರ್ಬೋನೇಟ್, ಆರ್.ಎನ್.ಎ, ಡಿ.ಎನ್.ಎ, ಪ್ರೊಟೀನ್ ನಂತಹ ರಾಸಾಯನಿಕ ವಸ್ತುಗಳನ್ನು ಹೊಂದಿದೆ. ಇದನ್ನು ಪ್ರೋಟೋಪ್ಲಾಸ್ಮಾ ಎಂತಲೂ ಕರೆಯುವರು. ಇಲ್ಲಿ ಜೈವಿಕ ವಸ್ತುಗಳಾದ ಮೈಟೋಕಾಂಡ್ರಿಯಾ, ರೈಬೋಸೋಮ್, ಕೋಶರಸಜಾಲ, ಕ್ಲೋರೋಪ್ಲಾಸ್ಟ್, ಗಾಲ್ಗಿ ಸಂಕೀರ್ಣ, ಲೈಸೋಸೋಮ್, ಸೆಂಟ್ರಿಯೋಲ್, ರಸದಾನಿಗಳಂತಹ ಅನೇಕ ಕಣದಂಗಗಳು ಇರುತ್ತವೆ

ಪ್ರೋಟೋಪ್ಲಾಸ್ಮದಲ್ಲಿ (ಕೋಶದ್ರವ್ಯ) ಎರಡು ವಿಧ

ಸೈಟೋಪ್ಲಾಸ್ಮ : ಇದು ಜೀವಕೋಶದಲ್ಲಿ ಕೋಶಕೇಂದ್ರದ ಹೊರಗೆ ಕಂಡುಬರುತ್ತದೆ. ಜೀವಕೋಶದ ಕಣದಂಗಗಳು ಕಂಡುಬರುವುದು ಸೈಟೋಪ್ಲಾಸ್ಮದಲ್ಲಿಯೇ. ಈ ಕಣದಂಗಗಳನ್ನು ಪೊರೆಸಹಿತ ಕಣದಂಗಗಳು ಮತ್ತು ಪೊರೆರಹಿತ ಕಣದಂಗಗಳು ಎಂದು ಎಂದು ವಿಭಾಗಿಸಲಾಗಿದೆ.

ನ್ಯೂಕ್ಲಿಯೊಪ್ಲಾಸ್ಮ : ಇದು ಜೀವಕೋಶದಲ್ಲಿ ಕೋಶಕೇಂದ್ರದ ಒಳಗೆ ಕಂಡುಬರುತ್ತದೆ.

ಕೋಶಕೇಂದ್ರ

ಎಲ್ಲಾ ಯುಕ್ಯಾರಿಯೋಟ್ ಜೀವಕೊಶಗಳಲ್ಲಿ ಕಂಡುಬರುವ ಪ್ರಧಾನ ಕಣದಂಗವನ್ನು ಕೋಶಕೇಂದ್ರ ಎನ್ನುವರು. ಇದು ಜೀವಕೋಶದ ಎಲ್ಲಾ ಕಾರ್ಯಗಳನ್ನು ನಿಯಂತ್ರಿಸುವ ಅತಿ ಅತಿದೊಡ್ಡ ಕಣದಂಗವಾಗಿದೆ.

ಯೂಕ್ಯಾರಿಯೋಟ್ ಜೀವಕೋಶಗಳಲ್ಲಿ ಒಂದು ಕೋಶಕೇಂದ್ರವಿರುತ್ತದೆ. ಆದರೆ ಲೋಳೆಯಂತಹ ಬೂಜಿನಲ್ಲಿ ಅನೇಕ ಕೋಶಕೇಂದ್ರಗಳಿರುತ್ತವೆ. ಸ್ತನಿಗಳಲ್ಲಿ ಕಂಡುಬರುವ ಪ್ರೌಢ ಕೆಂಪುರಕ್ತಕಣಗಳಲ್ಲಿ ಕೋಶಕೇಂದ್ರವೇ ಇರುವುದಿಲ್ಲ.

ಕೋಶಕೇಂದ್ರವು ಕೋಶಕೇಂದ್ರ ಪೊರೆ ಎಂಬ ಎರಡು ಪದರವುಳ್ಳ ಪೊರೆಯಿಂದ ಆವೃತವಾಗಿರುತ್ತದೆ. ಈ ಕೋಶಕೇಂದ್ರದೊಳಗೆ  ಕೋಶಕೇಂದ್ರ ದ್ರವ್ಯವಿದ್ದು ಈ ದ್ರವ್ಯದಲ್ಲಿ ಕ್ರೋಮ್ಯಾಟಿನ್ ಎಂಬ ವಸ್ತುವಿದೆ. ಈ ಕ್ರೋಮ್ಯಾಟಿನ್ ಜೀವಕೋಶ ವಿಭಜನೆಯ ಸಮಯದಲ್ಲಿ ವರ್ಣತಂತುಗಳಾಗಿ (ಕ್ರೋಮೋಸೋಮ್) ಮಾರ್ಪಡುತ್ತದೆ. ಆಗ ಈ ವರ್ಣತಂತುಗಳ ಒಳಗಿನ ಡಿ.ಎನ್‌.ಎ ಮೆಸೆಂಜರ್ ಆರ್‌ಎನ್ಎ (ಎಂ.ಆರ್‌.ಎನ್.ಎ) ಆಗಿ ಬದಲಾಗುತ್ತದೆ. ಈ ಎಂ.ಆರ್‌.ಎನ್.ಎ ಕೋಶಕೇಂದ್ರದಿಂದ ಹೊರಬಂದ ಮೇಲೆ ಪ್ರೋಟೀನ್ ಆಗಿ ಬದಲಾಗುತ್ತದೆ.

ವರ್ಣತಂತುವಿನಲ್ಲಿ ಡಿ ಆಕ್ಸಿರೈಬೊ ನ್ಯೂಕ್ಲಿಯಿಕ್ ಆಮ್ಲಗಳು (ಡಿ.ಎನ್.ಎ) ಇದ್ದು ಈ ಡಿ.ಎನ್.ಎ ಒಳಗೆ ಜೀನ್‍ಗಳಿರುತ್ತವೆ. ಪ್ರತಿ ಜೀವಿಯಲ್ಲೂ ವರ್ಣತಂತುಗಳ ಸಂಖ್ಯೆ ಒಂದಕ್ಕಿಂತ ಇನ್ನೊಂದರಲ್ಲಿ ಭಿನ್ನವಾಗಿರುತ್ತದೆ. ಮಾನವನ ದೇಹದಲ್ಲಿ 23 ಜೊತೆ ವರ್ಣತಂತುಗಳು ಅಥವಾ 46  ವರ್ಣತಂತುಗಳಿರುತ್ತವೆ. ಇದರಲ್ಲಿ 22 ಜೊತೆ ವರ್ಣತಂತುಗಳು (44 ವರ್ಣತಂತುಗಳು) ಹುಟ್ಟುವ ಮಗುವಿನ ರೂಪ. ಗುಣ, ವ್ಯಕ್ತಿತ್ವವನ್ನು ನಿರ್ಧರಿಸಿದರೆ ಒಂದು ಜೊತೆ ವರ್ಣತಂತು (2 ವರ್ಣತಂತುಗಳು) ಮಗುವಿನ ಲಿಂಗವನ್ನು ನಿರ್ಧರಿಸುತ್ತದೆ.

ಕಾಮೆಂಟ್‌ಗಳು