ಜೀರ್ಣಾಂಗ ವ್ಯೂಹ
ಜೀರ್ಣಾಂಗ ವ್ಯೂಹ
ಮಾನವನ ಜೀರ್ಣಾಂಗ ವ್ಯವಸ್ತೆಯು ಸುಮಾರು 30 ಅಡಿ (9 ಮೀಟರ್) ಉದ್ದವಾಗಿದೆ. ಇಲ್ಲಿ ಜೀರ್ಣಕ್ರಿಯೆಯು ಒಂದೇ ರೀತಿಯಾಗಿ ನಡೆಯುವುದಿಲ್ಲ ಪ್ರತಿ ಹಂತದಲ್ಲೂ ಜೀರ್ಣಕ್ರಿಯೆ ಭಿನ್ನವಾಗಿರುತ್ತದೆ.
ಬಾಯಿ
ಬಾಯಿಯಲ್ಲಿ ಹಲ್ಲುಗಳು ಆಹಾರವನ್ನು ಚೆನ್ನಾಗಿ ಅಗಿದು ಆಹಾರವನ್ನು ಚಿಕ್ಕ ಕಣಗಳಾಗಿ ಒಡೆಯುತ್ತವೆ. ಹಲ್ಲುಗಳು ಡೆಂಟಿನ್ ಎಂಬ ವಸ್ತುವಿನಿಂದಾಗಿವೆ. ಅಲ್ಲದೇ ಹಲ್ಲುಗಳ ಮೇಲೆ ಎನಾಮೆಲ್ ಎಂಬ ಹೊದಿಕೆಯಿದ್ದು ಇದು ಮಾನವ ದೇಹದಲ್ಲಿಯೇ ಅತ್ಯಂತ ಕಠಿಣವಾದ ವಸ್ತುವಾಗಿದೆ.
ಬಾಯಿಯಲ್ಲಿ ಉತ್ಪತ್ತಿಯಾಗುವ ಜೊಲ್ಲಿನಲ್ಲಿ ಎಮಿಲೇಸ್ ಎಂಬ ಕಿಣ್ವವಿರುತ್ತದೆ. ಇದು ಆಹಾರದಲ್ಲಿರುವ ಪಿಷ್ಟ ಪದಾರ್ಥಗಳು (ಕಾರ್ಬೋ ಹೈಡ್ರೇಟ್ಸ್) ಒಡೆದು ಸಣ್ಣ ಕಣಗಳಾಗಲು ಸಹಾಯ ಮಾಡುತ್ತದೆ. ಬಾಯಿಯಲ್ಲಿ ಈ ಕಾರ್ಬೋಹೈಡ್ರೇಟ್ ಗಳು ಒಡೆದು ಸಕ್ಕರೆಗಳಾಗಿ (ಮಾಲ್ಟೋಸ್) ಒಡೆಯುವ ಮೂಲಕ ಜೀರ್ಣಕ್ರಿಯೆ ಆರಂಭವಾಗುತ್ತದೆ. ಲಾಲಾರಸವು ಕ್ಷಾರಗುಣವುಳ್ಳ ಪದಾರ್ಥವಾಗಿದ್ದು ಆಹಾರದಲ್ಲಿ ಆಮ್ಲ ಪದಾರ್ಥಗಳಿದ್ದರೆ ಅವುಗಳನ್ನು ನಿಷ್ಕ್ರಿಯಗೊಳಿಸುತ್ತದೆ.
ಬಾಯಿಯಲ್ಲಿ ಪ್ಯಾರೋಟಿಡ್, ಸಬ್ ಮ್ಯಾಂಡಿಬ್ಯುಲರ್ ಮತ್ತು ಸಬ್ ಲಿಂಗ್ವಿಯಲ್ ಎಂಬ 3 ಮುಖ್ಯ ಗ್ರಂಥಿಗಳಿವೆ. ಇವುಗಳಲ್ಲಿ ಪ್ರಾರೋಟಿಡ್ ಅತಿದೊಡ್ಡ ಗ್ರಂಥಿ. ಈ ಮೂರೂ ಗ್ರಂಥಿಗಳು ಲಾಲಾರಸವನ್ನು ಉತ್ಪಾದಿಸಿ ಆಹಾರವನ್ನು ಜೀರ್ಣಗೊಳಿಸಲು, ಹಲ್ಲು ಮತ್ತು ಬಾಯಿಯ ಆರೋಗ್ಯ ಕಾಪಾಡಲು ಸಹಾಯಕವಾಗಿವೆ.
ನಾಲಿಗೆ ಮೇಲೆ ವಾನ್ ಎಬ್ನರ್ ಎಂಬ ಗ್ರಂಥಿಗಳು ಕಂಡುಬರುತ್ತಿದ್ದು ಇವು ಲಿಫೇಸ್ ಎಂಬ ಕಿಣ್ವಗಳನ್ನು ಸ್ರವಿಸುತ್ತವೆ. ಈ ಲಿಫೇಸ್ ಕೊಬ್ಬನ್ನು ಕರಗಿಸಲು ಸಹಾಯಕವಾಗಿದೆ. ಅಲ್ಲದೇ ಈ ಗ್ರಂಥಿಗಳು ಹಿಸ್ಟಟಿನ್ ಎಂಬ ಕಿಣ್ವಗಳನ್ನು ಸಹ ಸ್ರವಿಸುತ್ತಿದ್ದು ಈ ಕಿಣ್ವಗಳು ಆಹಾರದಲ್ಲಿರುವ ರೋಗಾಣುಗಳ ವಿರುದ್ಧ ಹೋರಾಡಲು ಸಹಾಯಕವಾಗಿವೆ.
ಬಾಯಿಯಲ್ಲಿ ಮೊದಲ ಹಂತದ ಜೀರ್ಣಕ್ರಿಯೆ ಮುಗಿಸಿದ ಆಹಾರವು ಗಂಟಲಿನಿಂದ ಜಠರಕ್ಕೆ ಮೀಡಿಯಾಸ್ಟ್ರಿನಮ್ ಎಂಬ ನಾಳದ ಮೂಲಕ ಹಾದು ಹೋಗುತ್ತದೆ. ಹಾಗೆ ಹಾದು ಹೋಗುವಾಗ ಆಹಾರವು ಶ್ವಾಸಕೋಶಕ್ಕೆ ಹೋಗದಂತೆ ಎಪಿಗ್ಲಾಟಿಸ್ ಎಂಬ ಅಂಗವು ತಡೆಯುತ್ತದೆ.
ಜಠರಕ್ಕೆ ಆಹಾರವು ಬಂದು ಸೇರಿದ ತಕ್ಷಣ ಜಠರದಲ್ಲಿ ಜೀರ್ಣಕ್ರಿಯೆ ಪ್ರಾರಂಭವಾಗುತ್ತವೆ. ಈ ಜೀರ್ಣಕ್ರಿಯೆ ನಡೆಯಲು ಹೈಡ್ರೋಕ್ಲೋರಿಕ್ ಆಮ್ಲ, ಪೆಪ್ಸಿನ್, ರೆನಿನ್ ಮತ್ತು ಸೋಡಿಯಂ ಕ್ಲೋರೈಡ್ ಗಳು ಬಿಡುಗಡೆಯಾಗುತ್ತವೆ. ಪೆಪ್ಸಿನ್ ಪ್ರೋಟಿನ್ ಅನ್ನು ಪೆಪ್ಟೈಡ್ ಆಗಿ ಪರಿವರ್ತಿಸುತ್ತದೆ. ರೆನಿನ್ ಹಾಲಿನ ಪ್ರೋಟಿನ್ ಅನ್ನು ಕರಗದ ಮೊಸರನ್ನಾಗಿ ಪರಿವರ್ತಿಸುತ್ತದೆ. ಹೈಡ್ರೋಕ್ಲೋರಿಕ್ ಆಮ್ಲವು ಆಹಾರವನ್ನು ಜೀರ್ಣ ಮಾಡುವುದರ ಜೊತೆ ಜಠರದೊಳಗೆ ಬಂದಿರಬಹುದಾದ ರೋಗಾಣುಗಳನ್ನು ನಾಶಮಾಡುತ್ತದೆ. ಸೋಡಿಯಂ ಕ್ಲೋರೈಡ್ ಸಹ ರೋಗಾಣುಗಳನ್ನು ನಾಶಮಾಡಲು ಸಹಾಯ ಮಾಡುತ್ತದೆ.
ಜಠರದಲ್ಲಿನ ಗ್ಯಾಸ್ಟ್ರಿಕ್ ಗ್ರಂಥಿಗಳಾದ ಪೈಲೋರಿಕ್, ಕಾರ್ಡಿಯಾಕ್ ಮತ್ತು ಫಂಡಸ್/ಆಕ್ಸಿಂಟಿಕ್ ಗಳು ಗ್ಯಾಸ್ಟ್ರಿನ್ ಕಿಣ್ವಗಳನ್ನು ಉತ್ಪಾದಿಸುತ್ತವೆ. ಈ ಗ್ಯಾಸ್ಟ್ರಿನ್ ಕಿಣ್ವಗಳು ಗ್ಯಾಸ್ಟ್ರಿಕ್ ರಸವನ್ನು ಬಿಡುಗಡೆ ಮಾಡುತ್ತವೆ. ಈ ರಸವು ಆಹಾರ ಜೀರ್ಣವಾಗಲು ನೆರವಾಗುತ್ತದೆ.
ಹೈಡ್ರೋಕ್ಲೋರಿಕ್ ಆಮ್ಲ, ರೆನಿನ್ ಮತ್ತು ಪೆಪ್ಸಿನ್ ಗಳು ಆಹಾರವನ್ನು ಜೀರ್ಣಮಾಡುವ ಕ್ರಿಯೆಯಲ್ಲಿ ಜಠರಕ್ಕೂ ಸಹ ಹಾನಿ ಮಾಡಬಹುದು. ಆಗ ಗ್ಯಾಸ್ಟ್ರಿಕ್ ಗ್ರಂಥಿಗಳಿಂದ ಉತ್ಪತ್ತಿಯಾದ ಪೆಪ್ಸಿನೊಜೆನ್ ಜೈಮೊಜೆನ್ ರಸಗಳು ಜಠರವನ್ನು ರಕ್ಷಿಸುತ್ತವೆ.
ಜಠರದಲ್ಲಿರುವ ಗಂಜಿರೂಪದ ಆಹಾರವನ್ನು ಕೈಮ್ ಎನ್ನುವರು. ಜಠರದಲ್ಲಿ ಜೀರ್ಣಕ್ರಿಯೆ 3 ರಿಂದ 4 ಗಂಟೆಗಳ ಕಾಲ ನಡೆದು ನಂತರ ಆಹಾರ ಸಣ್ಣ ಕರುಳಿಗೆ ಸಾಗುತ್ತದೆ.
ಜಠರದ ಸ್ನಾಯುಗಳಿಗೂ ಮತ್ತು ಮೆದುಳಿನ ನರಗಳಿಗೂ ನೇರ ಸಂಪರ್ಕವಿರುವುದರಿಂದ ಊಟದ ಸಮಯದಲ್ಲಿ ಯಾವುದೇ ಮಾನಸಿಕ ಒತ್ತಡ ಉಂಟಾದಲ್ಲಿ ಅದು ನೇರವಾಗಿ ಜಠರದ ಮೇಲೆ ಪರಿಣಾಮ ಬಿರುತ್ತದೆ. ಇದರಿಂದ ಜಠರದಲ್ಲಿ ಕಿಣ್ವಗಳು ಅತಿಯಾಗಿ ಸ್ರವಿಕೆಯಾಗಿ ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
ಮೇದೋಜೀರಕ ಗ್ರಂಥಿ (pancreas)
ಮೇದೋಜೀರಕ ಗ್ರಂಥಿಯು ನಾಳ ಮತ್ತು ನಿರ್ನಾಳ ಗ್ರಂಥಿ ಎರಡೂ ಆಗಿದೆ. ಈ ಗ್ರಂಥಿಯು ಮಾನವನ ಗ್ರಂಥಿಗಳಲ್ಲೇ ಅತಿದೊಡ್ಡದಾಗಿದೆ. ದೇಹದಲ್ಲಿ ಸಕ್ಕರೆಯ ಅಂಶ ಹೆಚ್ಚಾದಾಗ ಈ ಗ್ರಂಥಿಯು ಇನ್ಸುಲಿನ್ ಅನ್ನು ಬಿಡುಗಡೆ ಮಾಡಿ ದೇಹದ ಅಗತ್ಯಕ್ಕಿಂತಲೂ ಹೆಚ್ಚಾದ ಸಕ್ಕರೆಯನ್ನು ಗ್ಲುಕಗನ್ ಆಗಿ ಪರಿವರ್ತಿಸಿ ಸ್ನಾಯುಗಳಲ್ಲಿ ಸಂಗ್ರಹಿಸುತ್ತದೆ. ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾದಾಗ ಗ್ಲುಕಗನ್ ಅನ್ನು ಮತ್ತೆ ಸಕ್ಕರೆಯ ರೂಪಕ್ಕೆ ಪರಿವರ್ತಿಸಿ ದೇಹದಲ್ಲಿ ಸಕ್ಕರೆ ಅಂಶ ಸಮತೋಲನವಾಗುವಂತೆ ನೋಡಿಕೊಳ್ಳುತ್ತದೆ.
ಮೇದೋಜೀರಕ ಗ್ರಂಥಿ ಪ್ಯಾಂಕ್ರಿಯಾಟಿಕ್ ರಸ ಉತ್ಪಾದಿಸಿ ಅದನ್ನು ಡಿಯೋಡಿನಂಗೆ ಬಿಡುಗಡೆ ಮಾಡುತ್ತದೆ. ನಂತರ ಈ ಪ್ಯಾಂಕ್ರಿಯಾಟಿಕ್ ರಸವು ಜೀರ್ಣಕಾರಿ ಕಿಣ್ವಗಳನ್ನು ಕಿಬ್ಬೊಟ್ಟೆಗೆ ರವಾನಿಸುತ್ತದೆ.
ಬೈಕಾರ್ಬೋನೇಟ್ ಅಯಾನುಗಳನ್ನು ಹೊಂದಿರುವ ಮೇದೋಜೀರಕ ಗ್ರಂಥಿಯ ಪ್ರತ್ಯಾಮ್ಲೀಯ ರಸವು ಆಮ್ಲ ಪಿಷ್ಟವನ್ನು ತಟಸ್ಥಗೊಳಿಸಲು ಪಿತ್ತರಸಕ್ಕೆ ಸಹಾಯ ಮಾಡುತ್ತದೆ.
ಪಿತ್ತಜನಕಾಂಗ/ಯಕೃತ್ತು (Liver)
ಪಿತ್ತಜನಕಾಂಗವು ಪಿತ್ತರಸವನ್ನು ಉತ್ಪಾದಿಸುತ್ತದೆ. ಪಿತ್ತರಸದ ಮುಖ್ಯ ಕೆಲಸವೆಂದರೆ ಕೊಬ್ಬು-ತೈಲವನ್ನು ಸೂಕ್ಷ್ಮವಾದ ಕಣಗಳಾಗಿ ಒಡೆದು ಅದನ್ನು ಗಂಜಿಯಂತಿರುವ ಅಹಾರದೊಡನೆ ಬೆರಸುವ ಕೆಲಸವನ್ನು ಮಾಡುತ್ತದೆ. ಮೇದೋಜೀರಕ ಗ್ರಂಥಿಯಿಂದ ಬರುವ ಸ್ಟೀಪ್ಸೀನ್ ಎಂಜೈಮ್ ಈ ಕೊಬ್ಬಿನ ಕಣಗಳನ್ನು ಗ್ಲಿಸರೀನ್ ಮತ್ತು ಕೊಬ್ಬಿನ ದ್ರಾವಕಗಳನ್ನಾಗಿ (ಫ್ಯಾಟೀ ಆಸಿಡ್ಸ್) ಪರಿವರ್ತಿಸುತ್ತದೆ.
ಜೀರ್ಣಕಿಯೆ ನಡೆಯುವಾಗ ಪಿತ್ತರಸವು ಬೃಹತ್ ಪ್ರಮಾಣದಲ್ಲಿ ಲಿಪೋಪ್ರೊಟೀನ್ಗಳನ್ನು ಬಿಡುಗಡೆ ಮಾಡುತ್ತದೆ. ಈ ಲಿಪೋಪ್ರೊಟೀನ್ಸ್ ಕಾರ್ಬೋಹೈಡ್ರೇಟ್ಗಳನ್ನು ಒಡೆಯುವ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಆ ಸಮಯದಲ್ಲಿ ಆಹಾರದಲ್ಲಿರುವ ಆಮ್ಲ (ಆ್ಯಸಿಡಿಟಿ) ಸಹ ಸಮಸ್ಥಿತಿಗೆ ಬರುವುದು
ಸತ್ತುಹೋದ ಕೆಂಪು ರಕ್ತಕಣಗಳನ್ನು ವಿಸರ್ಜನೆಯ ಮೂಲಕ ಹೊರಹಾಕುವ ಮೂಲಕ ಇದು ಸಹ ಚರ್ಮದಂತೆ ತ್ಯಾಜ್ಯ ನಿರ್ವಹಣೆಯ ಕೆಲಸ ಮಾಡುತ್ತದೆ.
ಕರುಳು ವ್ಯವಸ್ಥೆ
ಸಣ್ಣ ಕರುಳು
ದ್ರವರೂಪದ ಪದಾರ್ಥಗಳು ಜಠರದಲ್ಲಿಯೇ ಜೀರ್ಣವಾಗಿ ರಕ್ತಕ್ಕೆ ಸೇರುತ್ತವೆ, ಆದರೆ ಘನ ಅಥವಾ ಗಂಜಿಯ ರೂಪದ ಪದಾರ್ಥಗಳು ಪೂರ್ಣವಾಗಿ ಜೀರ್ಣವಾಗಿ ರಕ್ತಕ್ಕೆ ಸೇರುವ ಕ್ರಿಯೆ ನಡೆಯುವುದು ಸಣ್ಣ ಕರುಳಿನಲ್ಲಿ.
ಆಹಾರವು ಜಠರದಿಂದ ಸಣ್ಣಕರುಳಿಗೆ ಬಂದಾಗ ಅದರಲ್ಲಿ ಹೈಡ್ರೋಕ್ಲೋರಿಕ್ ಆಮ್ಲವು ಸಹ ಇರುತ್ತದೆ. ಆಮ್ಲವು ಹೆಚ್ಚಾಗಿರುವುದರಿಂದ ಸಣ್ಣ ಕರುಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಆಮ್ಲವನ್ನು ಸಮತೋಲನ ಮಾಡಲು ಬ್ರೂನರ್ ಗ್ರಂಥಿಗಳು ಬೈ ಕಾರ್ಬೋನೇಟ್ ಅನ್ನು ಸ್ರವಿಸುತ್ತವೆ.
ಆಹಾರವು ಸಣ್ಣಕರುಳಿಗೆ ಬಂದಾಗ ಪಿತ್ತಜನಕಾಂಗದಿಂದ ಪಿತ್ತರಸ, ಮೇದೋಜೀರಕ ಗ್ರಂಥಿಯಿಂದ ಮೇದೋಜೀರಕ ರಸ ಮತ್ತು ಕರುಳಿನಲ್ಲಿ ರಸ ಬಿಡುಗಡೆಯಾಗಿ ಕರುಳಿನಲ್ಲಿರುವ ಆಹಾರದಲ್ಲಿ ಬಂದು ಸೇರುತ್ತವೆ.
ಆಹಾರವು ಕ್ರಮವಾಗಿ ಸಣ್ಣ ಕರುಳಿನ ಡಿಯೋಡಿನಂ (ಸಣ್ಣಕರುಳಿನ ಮೊದಲ ಭಾಗ), ಜೆಜುನಂ ಮತ್ತು ಈಲಿಯಂ (ಸಣ್ಣಕರುಳಿನ ಕೊನೆಯ ಭಾಗ) ಎಂಬ ಭಾಗಗಳ ಮೂಲಕ ಹಾದು ಹೋಗುತ್ತದೆ.
ಕರುಳಿನಲ್ಲಿ ಆಹಾರವು ಸುಮಾರು 2 ಗಂಟೆಗಳ ಕಾಲವಿರುತ್ತದೆ. 90% ಜೀರ್ಣಕ್ರಿಯೆ ನಡೆಯುವುದೇ ಸಣ್ಣ ಕರುಳಿನಲ್ಲಿ. ಸಣ್ಣ ಕರುಳಿನಲ್ಲಿ ಬಿಡುಗಡೆಯಾಗುವ ಟ್ರಿಪ್ಸಿನ್ಎಂ ಬ ಕಿಣ್ವವು ಆಹಾರ ಜೀರ್ಣವಾಗಲು ಸಹಾಯ ಮಾಡುತ್ತದೆ.
ಪಿತ್ತರಸವು ಆಹಾರದಲ್ಲಿನ ಕೊಬ್ಬಿನಾಂಶವನ್ನು ಜೀರ್ಣಗೊಳಿಸುವುದನ್ನು ಎಮಲ್ಸೀಕರಣ ಎನ್ನುವರು. ಮೇದೋಜೀರಕ ಗ್ರಂಥಿಯಲ್ಲಿರುವ ಅಮೈಲೇಸ್ ಕಿಣ್ವವು ಪಿಷ್ಟದ ಜೀರ್ಣಕ್ರಿಯೆಯಲ್ಲಿ ಮತ್ತು ಲಿಫೇಸ್ ಕಿಣ್ವ ಸಂಕೀರ್ಣ ಕೊಬ್ಬಿನ ಜೀರ್ಣಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ.
ಕರುಳಿನ ರಸದಲ್ಲಿ ಸುಕ್ರೇಸ್, ಮಾಲ್ಟೇಸ್, ಲ್ಯಾಕ್ಟೇಸ್, ಪೆಪ್ಟೈಡೇಸ್ ಮತ್ತು ಲಿಫೇಸ್ ಎಂಬ ಕಿಣ್ವಗಳಿರುತ್ತವೆ. ಸುಕ್ರೇಸ್ ಕಬ್ಬಿನ ಸಕ್ಕರೆಯನ್ನು ಗ್ಲುಕೋಸ್ ಆಗಿ ಪರಿವರ್ತಿಸುತ್ತದೆ. ಮಾಲ್ಟೇಸ್ ಹಿಟ್ಟಿನಲ್ಲಿರುವ ಸಕ್ಕರೆಯನ್ನು ಗ್ಲುಕೋಸ್ ಆಗಿ ಪರಿವರ್ತಿಸುತ್ತದೆ. ಲ್ಯಾಕ್ಟೇಸ್ ಹಾಲಿನಲ್ಲಿರುವ ಸಕ್ಕರೆಯನ್ನು ಗ್ಲುಕೋಸ್ ಆಗಿ ಪರಿವರ್ತಿಸುತ್ತದೆ. ಪೆಪ್ಟೈಡೇಸ್ ಪೆಪ್ಟೈಡ್ ಗಳನ್ನು ಅಮೈನೋ ಆಮ್ಲಗಳನ್ನಾಗಿ ಪರಿವರ್ತಿಸುತ್ತದೆ. ಲಿಫೇಸ್ ಸರಳ ಕೊಬ್ಬನ್ನು ಗ್ಲಿಸರಾಲ್ ಮತ್ತು ಕೊಬ್ಬಿನ ಆಮ್ಲಗಳಾಗಿ ಪರಿವರ್ತಿಸುತ್ತದೆ.
ಗಂಜಿರೂಪದ ಆಹಾರದಲ್ಲಿನ ಸಾರವನ್ನು ಲಿಂಫ್ ನಾಳಗಳು ಮತ್ತು ದುಗ್ಧನಾಳಗಳು ಹೀರಿಕೊಳ್ಳುತ್ತವೆ. ಲೆಕ್ಟೀಲ್ ಗಳು ಜೀರ್ಣಗೊಂಡ ಕೊಬ್ಬನ್ನು ಹೀರಿಕೊಳ್ಳುತ್ತವೆ.
ಆಹಾರ ಜೀರ್ಣವಾದ ನಂತರ ಆಹಾರದಲ್ಲಿನ ಸಾರವನ್ನು ಸಣ್ಣಕರುಳಿನ ಕೊನೆಯ ಭಾಗವಾದ ಈಲಿಯಂ ನಲ್ಲಿರುವ ವಿಲ್ಲಿಗಳೆಂಬ ಸೂಕ್ಷ್ಮ ನಾಳಗಳು ಹೀರಿ ದೇಹಕ್ಕೆಲ್ಲಾ ಸಾಗಿಸುತ್ತವೆ. ಈಲಿಯಂ ನಲ್ಲಿ ವಿಟಮಿನ್ ಬಿ12 ಇರುತ್ತದೆ.
ದೊಡ್ಡ ಕರುಳು
ಸಣ್ಣ ಕರುಳು ಮತ್ತು ದೊಡ್ಡ ಕರುಳುಗಳ ನಡುವೆ ಸೀಕಮ್ ಎಂಬ ಒಂದು ಚೀಲ ಕಂಡುಬರುತ್ತದೆ. ಈ ಸೀಕಮ್ ಇಲಿಯೊಸಿಕಲ್ ಎಂಬ ಸ್ವಯಂ ಕವಾಟವನ್ನು ಹೊಂದಿದೆ, ಈ ಸೀಕಮ್ ಈಲಿಯಮ್ ನಿಂದ ಗಂಜಿರೂಪದಲ್ಲಿರುವ ಆಹಾರವನ್ನು ಪಡೆದು ಮತ್ತೊಮ್ಮೆ ಜೀರ್ಣಕ್ರಿಯೆಗೆ ಒಳಪಡಿಸುತ್ತದೆ. ಮಾನವ ದೇಹದ ನಿಷ್ಕ್ರಿಯ ಅಂಗವಾದ ಅಪೆಂಡಿಕ್ಸ್ ಕಂಡುಬರುವುದು ಇಲ್ಲಿಯೇ.
ಗಂಜಿ ರೂಪದಲ್ಲಿರುವ ಆಹಾರದಲ್ಲಿ ಈಗಾಗಲೇ ಅನೇಕ ಕಿಣ್ವಗಳು ಸೇರಿರುವ ಕಾರಣ ದೊಡ್ಡ ಕರುಳಿನಲ್ಲಿಯೂ ಸಹ ಜೀರ್ಣ ಕ್ರಿಯೆ ಮುಂದುವರೆಯುತ್ತದೆ. ದೊಡ್ಡ ಕರುಳಿನಲ್ಲಿ ಸೇರಿಕೊಂಡಿರುವ ಬ್ಯಾಕ್ಟೀರಿಯಾಗಳು ಆಹಾರ ಪದಾರ್ಥದಲ್ಲಿನ ಸೆಲ್ಯೂಲೋಸ್ ಪದಾರ್ಥಗಳನ್ನು ಒಡೆದು ಉಳಿದ ಪೋಷಕಾಂಶಗಳು ದೇಹಕ್ಕೆ ಸೇರಲು ಸಹಾಯ ಮಾಡುತ್ತವೆ.
ದೊಡ್ಡ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳು ಜೀವಸತ್ವಗಳನ್ನು ಉತ್ಪಾದಿಸುವ ಕೆಲಸ ಮಾಡುತ್ತವೆ. ಅವುಗಳಲ್ಲಿ ಮುಖ್ಯವಾದ ಜೀವಸತ್ವಗಳು ದೇಹದ ಉಷ್ಣತೆಯನ್ನು ನಿಯಂತ್ರಿಸುವ ವಿಟಮಿನ್ ಬಿ12 ಮತ್ತು ರಕ್ತ ಹೆಪ್ಪುಗಟ್ಟಲು ಸಹಾಯಕವಾದ ವಿಟಮಿನ್ ಕೆ. ಇವುಗಳಲ್ಲದೇಕ ತೈಯಾಮಿನ್, ಮತ್ತು ರೈಬೋಫ್ಲೆವಿನ್ ಇವುಗಳ ಉತ್ಪಾದನೆ ಮತ್ತು ಸಮತೋಲನ ನಿರ್ವಹಣೆ ಮಾಡುವಲ್ಲಿಯೂ ಸಹ ದೊಡ್ಡ ಕರುಳಿನ ಪಾತ್ರ ಪ್ರಮುಖವಾದುದು.
ಎಲ್ಲದಕ್ಕಿಂತ ಮುಖ್ಯವಾಗಿ ತ್ಯಾಜ್ಯವಾಗಿ ಹೊರಹೋಗುತ್ತಿರುವ ಪದಾರ್ಥದಲ್ಲಿನ ನೀರಿನಾಂಶವನ್ನು ಹಿರಿಕೊಂಡು ಶರೀರದಲ್ಲಿ ನೀರಿನ ಸಮತೋಲನ ಇರುವಂತೆ ಕಾಪಾಡುತ್ತದೆ.
ಗುಲ್ಮ (Spleen)
ಗುಲ್ಮವು ನೇರವಾಗಿ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧ ಪಡದಿದ್ದರೂ ಅದು ಜೀರ್ಣ ಕ್ರಿಯೆಗೆ ಪರೋಕ್ಷವಾಗಿ ಸಹಾಯಕವಾಗಿದೆ. ಜಠರದ ಎಡಭಾಗದಲ್ಲಿರುವ ಗುಲ್ಮವು ನಾಶವಾದ ಕೆಂಪು ರಕ್ತ ಕಣಗಳನ್ನು ಒಡೆಯುತ್ತವೆ ಆದ್ದರಿಂದ ಇದನ್ನು ಕೆಂಪು ರಕ್ತ ಕಣಗಳ ಸ್ಮಶಾನ ಎನ್ನುವರು.
ನಾಶವಾದ ರಕ್ತಕಣಗಳನ್ನು ಗುಲ್ಮವು ಯಕೃತ್ತಿಗೆ ಕಳುಹಿಸುತ್ತದೆ. ಈ ರಕ್ತಕಣಗಳು ಪಿತ್ತಕೋಶದಿಂದ ಹಳದಿ ಬಣ್ಣದ ಬಿಲಿರುಬಿನ್ ರೂಪದಲ್ಲಿ ಸ್ರವಿಸುತ್ತವೆ.
ಗುಲ್ಮದ ಇನ್ನೊಂದು ಪ್ರಮುಖ ಕಾರ್ಯವೆಂದರೆ ರಕ್ತಕ್ಕೆ ಅಗತ್ಯವಾದ ಕಬ್ಬಿಣಾಂಶವನ್ನು ಉತ್ಪಾದಿಸವುದು, ಈ ಕಬ್ಬಿಣಾಂಶವು ಮೂಳೆಯ ಮಜ್ಜೆಯಲ್ಲಿ ಹೊಸ ರಕ್ತ ಕಣಗಳ ಉತ್ಪತ್ತಿಗೆ ಸಹಾಯಕವಾಗುತ್ತದೆ.
ದೇಹದಲ್ಲಿ ಆಹಾರ ಪದಾರ್ಥಗಳ ಪರಿವರ್ತನೆ
ಪಿಷ್ಟ – ಮಾಲ್ಟೋಸ್ – ಗ್ಲುಕೋಸ್
ಪ್ರೋಟಿನ್ - ಪೆಪ್ಟೈಡ್ – ಅಮೈನೋ ಆಮ್ಲ
ಕೊಬ್ಬು (ಲಿಪಿಡ್) - ಸರಳ ಕೊಬ್ಬು – ಕೊಬ್ಬಿನ ಆಮ್ಲಗಳು ಮತ್ತು ಗ್ಲಿಸರಾಲ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ